ನ್ಯೂಸ್ ನಾಟೌಟ್: ಹಮಾಸ್ ಉಗ್ರರಿಗೆ ಚೀನಾ ಸರ್ಕಾರ ಶಸ್ತ್ರಾಸ್ತ್ರ ಮತ್ತು ಸಂವಹನ ಸಾಧನಗಳನ್ನು ಪೂರೈಕೆ ಮಾಡುತ್ತಿದೆ ಎಂದು ಇಸ್ರೇಲ್ ಸೇನೆ ಅನುಮಾನ ವ್ಯಕ್ತಪಡಿಸಿದೆ. ಹಮಾಸ್ ಹಾರಿಬಿಟ್ಟ ರಾಕೆಟ್ ಗಳು ಮತ್ತು ಅವರು ಬಳಸಿರುವ ಸಂವಹನ ಸಾಧನಗಳ ಬಗ್ಗೆ ಇಸ್ರೇಲ್ ಸೇನೆ ಅಧ್ಯಯನ ನಡೆಸಿದ್ದು, ಈ ಅಧ್ಯಯನದಿಂದ ಚೀನಾ ಯುದ್ಧ ಸಾಮಗ್ರಿಗಳು ದೊರಕಿವೆ ಎನ್ನಲಾಗಿದೆ.
ಈ ಅಧ್ಯಯನ ಹಮಾಸ್ ಉಗ್ರರ ನಡುವಿನ ಸಂಬಂಧವನ್ನು ತೋರಿಸುತ್ತಿದೆ. ಅಲ್ಲದೇ ಇಸ್ರೇಲ್ನ ಗುಪ್ತಚರ ವಿಭಾಗವೂ ಈ ಬಗ್ಗೆ ತನಿಖೆ ನಡೆಸಿದ್ದು, ಹಮಾಸ್ ಉಗ್ರರು ಚೀನಾ ಮೂಲದ ಶಸ್ತ್ರಾಸ್ತ್ರ ಬಳಕೆ ಮಾಡಿದ್ದಾರೆ ಎಂದು ಹೇಳಿದೆ.
ಉತ್ತರ ಗಾಜಾ ಪ್ರದೇಶದಲ್ಲಿ ತಾವು ನೀಡಿರುವ ಸೂಚನೆಯಂತೆ ನಾಗರಿಕರನ್ನು ಸ್ಥಳಾಂತರಿಸಲು ಅಡ್ಡಿ ಮಾಡುತ್ತಿರುವ ಹಮಾಸ್ ಬಂಡುಕೋರರಿಗೆ ಸಹಾಯ ಮಾಡುತ್ತಿರುವ ಹಿಜ್ಬುಲ್ಲಾ ಸಂಘಟನೆ ಹಾಗೂ ಇರಾನ್ಗೆ ಬೆಂಜಮಿನ್ ನೆತನ್ಯಾಹು ತಮ್ಮ ಸಹನೆ ಪರೀಕ್ಷಿಸಬೇಡಿ ಎಂದು ಎಚ್ಚರಿಸಿದ್ದಾರೆ.
ಇಸ್ರೇಲ್ ಸಂಸತ್ತು ಉದ್ದೇಶಿಸಿ ಮಾತನಾಡಿದ ಅವರು, ‘ಗಾಜಾ ಪಟ್ಟಿಯಲ್ಲಿರುವ ಹಮಾಸ್ ಉಗ್ರರನ್ನು (Hamas) ಸದೆಬಡಿಯಲು ಸಮಸ್ತ ವಿಶ್ವ ಸಮುದಾಯ ಒಂದುಗೂಡಬೇಕು. ಇದು ನಿಮ್ಮದೇ ಯುದ್ಧ. ಗಾಜಾ ಪಟ್ಟಿಯಲ್ಲಿರುವ ಅಮಾಯಕ ನಾಗರಿಕರ ಸ್ಥಳಾಂತರ ವಿಚಾರದಲ್ಲಿ ತಮ್ಮ ಸಹನೆಯನ್ನು ಪರೀಕ್ಷಿಸಿದರೆ ಹಿಜ್ಬುಲ್ಲಾ ಹಾಗೂ ಇರಾನ್ಗೆ ತಕ್ಕ ಪ್ರತ್ಯುತ್ತರ ನೀಡಲು ಸಿದ್ಧರಿದ್ದೇವೆ’ ಎನ್ನುವ ಮೂಲಕ ಬೆಂಜಮಿನ್ ಹಮಾಸ್ ಬೆಂಬಲಿಗರಿಗೆ ಎಚ್ಚರಿಕೆ ನೀಡಿದ್ದಾರೆ.
ಅಮೆರಿಕ ಇಸ್ರೇಲ್ ಗೆ ಸರ್ವಸಹಾಯ ಮಾಡಿದರೂ ಅಮೇರಿಕ ಅಧ್ಯಕ್ಷ ಈಗ ಗಾಜಾ ಮೇಲಿನ ಇಸ್ರೇಲ್ ದಾಳಿ ತಪ್ಪು ಎಂದಿದ್ದಾರೆ. ಗಾಜಾ ಪಟ್ಟಿ ಪ್ರದೇಶದ ಮೇಲೆ ಭೂದಾಳಿ ನಡೆಸಿ ಅದರ ವಶಕ್ಕೆ ಇಸ್ರೇಲ್ ಸಜ್ಜಾಗಿದೆ. ‘ಉಗ್ರರನ್ನು ಸದೆಬಡಿಯುವ ಉದ್ದೇಶದಿಂದ ಸಂಪೂರ್ಣ ದೇಶ ಹಾಳು ಮಾಡುವುದು ತಪ್ಪು ನಿರ್ಧಾರ. ಗಾಜಾ಼ ಮೇಲೆ ದಾಳಿ ಮಾಡುವಾಗ ಇಸ್ರೇಲ್ ಯುದ್ಧ ನೀತಿ ಗಮನದಲ್ಲಿಟ್ಟುಕೊಳ್ಳಬೇಕು. ಗಾಜಾಕ್ಕೆ ಇಸ್ರೇಲ್ ನೀರಿನ ಪೂರೈಕೆಯನ್ನೂ ನಿಲ್ಲಿಸಿದ್ದು ಬಹಳ ಅಮಾನವೀಯ ಕೃತ್ಯ. ಜೊತೆಗೆ ಗಾಜಾ ಪ್ರದೇಶವನ್ನು ಮರು ಆಕ್ರಮಿಸುವ ಇಸ್ರೇಲ್ ನಿರ್ಧಾರ ತಪ್ಪು’ ಎಂದಿದ್ದಾರೆ ಎಂದು ವರದಿ ತಿಳಿಸಿದೆ.