ನ್ಯೂಸ್ ನಾಟೌಟ್: ಶಿಥಿಲಾವಸ್ಥೆಯಲ್ಲಿದ್ದ ಅಜ್ಜಾವರದ ದೊಡ್ಡೇರಿ ಸರ್ಕಾರಿ ಕನ್ನಡ ಶಾಲೆಗೆ ನ್ಯೂಸ್ ನಾಟೌಟ್ ವರದಿ ಬೆನ್ನಲ್ಲೇ ಹೊಸ ಕಾಯಕಲ್ಪ ನೀಡಲಾಗಿದೆ. ಸುಮಾರು 7 ಲಕ್ಷ ರೂ. ಮಂಜೂರು ಮಾಡಲಾಗಿದೆ.
ಆಗಸ್ಟ್ 16ರಂದು ಅಜ್ಜಾವರದ ಶಾಲೆಯ ಕಥೆಯನ್ನು “ಶಿಕ್ಷಣ ಸಚಿವರೇ ಇಲ್ನೋಡಿ..! ಬೀಳುತ್ತಿರುವ ಸರ್ಕಾರಿ ಕನ್ನಡ ಶಾಲೆಗೆ ಕಂಬ ಕೊಟ್ಟು ನಿಲ್ಲಿಸಿದ್ದಾರೆ ಜನ..! 72 ಮಕ್ಕಳಿದ್ದ ಶಾಲೆಯಲ್ಲಿ ಈಗ 12 ಮಕ್ಕಳು” ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿದ್ದೆವು. ಈ ಬೆನ್ನಲ್ಲೇ ಸ್ಥಳಕ್ಕೆ ಶಾಸಕಿ ಭಾಗೀರಥಿ ಮುರುಳ್ಯ ಅವರು ಅಧಿಕಾರಿಗಳ ತಂಡದ ಜೊತೆಗೆ ತೆರಳಿ ಸಮಸ್ಯೆಯನ್ನು ಖುದ್ದಾಗಿ ವೀಕ್ಷಿಸಿದ್ದರು. ಊರವರ ಮತ್ತು ತಾವು ತಾಲೂಕು ಪಂಚಾಯತ್ ಅನುದಾನ ಒದಗಿಸಿ ಕಟ್ಟಡದ ಕಾಮಗಾರಿ ನಡೆಸುವಂತೆ ಸೂಚಿಸಿದ್ದರು.
ಅದೇ ಮಾದರಿಯಲ್ಲಿ ದಿನಾಂಕ 08-10-2023 ರಂದು ಶಾಲೆಯ ಎಸ್ ಡಿ ಎಂ ಸಿ ಸಮಿತಿಯು ತುರ್ತು ಸಭೆ ಸೇರಿ ಕೆಲವು ನಿರ್ಣಯಗಳನ್ನು ಮಾಡಿರುವುದಾಗಿ ತಿಳಿದು ಬಂದಿದೆ. ಅ.8ರಂದು ಶಾಲಾ ಎಸ್.ಡಿ.ಎಂ.ಸಿ. ಅಧ್ಯಕ್ಷ ದಯಾನಂದ ಅವರ ಅಧ್ಯಕ್ಷತೆಯಲ್ಲಿ ನಡೆದಿದೆ. ಎಸ್.ಡಿ.ಎಂ.ಸಿ. ಸದಸ್ಯರು ಹಾಜಾರಾತಿಯಲ್ಲಿ ಶಾಲೆಯಲ್ಲಿ ಸಭೆ ನಡೆಯಿತು. ಈ ಹಿಂದೆ ಮಂಜೂರಾಗಿದ್ದ ರೂ.7 ಲಕ್ಷ ಅನುದಾನ ಬಂದಿದ್ದು ಶಾಲೆಯ 3 ಕೊಠಡಿಗಳನ್ನು ಉತ್ತಮ ರೀತಿಯಲ್ಲಿ ದುರಸ್ತಿಪಡಿಸುವ ಕಾರ್ಯ ಶೀಘ್ರವೇ ಮಾಡಲಾಗುತ್ತದೆ ಎಂದು ತಿಳಿಸಲಾಗಿದೆ.