ನ್ಯೂಸ್ ನಾಟೌಟ್: ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಿದ ಹಲವು ದೇಶಗಳಿಂದ ಭಾರತದಿಂದ ಕಳವಾಗಿ ಅಥವಾ ಅಕ್ರಮ ಮಾರಾಟಗಳಿಂದ ಸಿಕ್ಕಿ ಬೇರೆ ದೇಶದ ಸರ್ಕಾರಗಳು ವಶಪಡಿಸಿಕೊಂಡು ತಮ್ಮ ಮ್ಯೂಸಿಯಂ ನಲ್ಲಿಟ್ಟ ಭಾರತದ ಪಾರಂಪರಿಕ ವಸ್ತುಗಳನ್ನು ಮತ್ತೆ ಉಡುಗೊರೆಯ ರೂಪದಲ್ಲಿ ಮರಳಿ ತರಲಾಗಿದೆ. ಈಗ ಮಹರಾಷ್ಟ್ರ ಸರ್ಕಾರ ಅಂತಹದ್ದೇ ಸಾಹಸವೊಂದಕ್ಕೆ ಕೈ ಹಾಕಿದೆ.
ಛತ್ರಪತಿ ಶಿವಾಜಿ ಮಹಾರಾಜರ ವಾಘ್ ನಖ್ ಅಥವಾ ಹುಲಿ ಉಗುರು ಮಾದರಿ ಅಸ್ತ್ರ 350 ವರ್ಷಗಳ ಬಳಿಕ ಭಾರತಕ್ಕೆ ಮರಳುತ್ತಿದೆ ಎಂಬ ಸುದ್ದಿ ಎಲ್ಲೆಡೆ ಚರ್ಚೆಗೆ ಕಾರಣವಾಗಿದೆ.
1659 ರಲ್ಲಿ ಬಿಜಾಪುರ ಸುಲ್ತಾನರ ಸೇನಾಪತಿ ಅಫ್ಜಲ್ ಖಾನ್ ನನ್ನು ಸೋಲಿಸಲು ಶಿವಾಜಿ ಮಹಾರಾಜರು ಬಳಸಿದ್ದ ‘ಹುಲಿ ಉಗುರು’ ಆಯುಧವು ನವೆಂಬರ್ನಲ್ಲಿ ಲಂಡನ್ನಿಂದ ಮಹಾರಾಷ್ಟ್ರಕ್ಕೆ ಮರಳಲಿದೆ ಎಂದು ಹೇಳಲಾಗಿದೆ. ಈ ವರ್ಷ ಛತ್ರಪತಿ ಶಿವಾಜಿಯ ಪಟ್ಟಾಭಿಷೇಕದ 350 ನೇ ವಾರ್ಷಿಕೋತ್ಸವವನ್ನು ಆಚರಿಸಲಾಗುತ್ತಿದ್ದು, ಈ ಸಂದರ್ಭದ ಸ್ಮರಣಾರ್ಥ ಮೂರು ವರ್ಷಗಳ ಪ್ರದರ್ಶನಕ್ಕಾಗಿ ಲಂಡನ್ನ ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂನಿಂದ ಹುಲಿ ಪಂಜದ ಆಯುಧ ವ್ಯಾಘ್ರನಖವನ್ನು ಮರಳಿ ತರಲಾಗುತ್ತಿದೆ ಎನ್ನಲಾಗಿದೆ.
ವಾಘ್ ನಖ್ ಅನ್ನು ದಕ್ಷಿಣ ಮುಂಬೈನಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯದಲ್ಲಿ ಇರಿಸಲಾಗುವುದು ಎಂದು ಹೇಳಲಾಗಿದೆ.
ಇನ್ನು ಹಾಲಿ ವಾಘ್ ನಖ್ ಮೇಲೂ ಗುಮಾನಿ ಮೂಡುತ್ತಿದ್ದು, ವಾಘ್ ನಖ್’ ನ ಸತ್ಯಾಸತ್ಯತೆ ಮಹಾರಾಷ್ಟ್ರದಲ್ಲಿ ಭಾರಿ ಚರ್ಚೆಯಲ್ಲಿದೆ. ವಿಕ್ಟೋರಿಯಾ ಮತ್ತು ಆಲ್ಬರ್ಟ್ ಮ್ಯೂಸಿಯಂ ವೆಬ್ಸೈಟ್ ಛತ್ರಪತಿ ಶಿವಾಜಿ ಆಯುಧವನ್ನು ಬಳಸಿಲ್ಲ ಎಂದು ಹೇಳುತ್ತದೆ ಎಂದು ಇತಿಹಾಸ ತಜ್ಞ ಇಂದರ್ಜಿತ್ ಸಾವಂತ್ ಗಮನಸೆಳೆದಿದ್ದಾರೆ. ಇದೇ ಕಾರಣಕ್ಕೆ ಶಿವಸೇನಾ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಕೂಡ ‘ವಾಘ್ ನಖ್’ ನ ಸತ್ಯಾಸತ್ಯತೆಯನ್ನು ಪ್ರಶ್ನಿಸಿದ್ದಾರೆ. ಮಾತ್ರವಲ್ಲದೇ ಇದು ಚುನಾವಣಾ ಸಂದರ್ಭದಲ್ಲಿ ಮತದಾರರನ್ನು ಸೆಳೆಯುವ ಚುನಾವಣಾ ಗಿಮಿಕ್ ಎಂದು ಕಿಡಿಕಾರಿದ್ದಾರೆ.
ಮಹಾರಾಷ್ಟ್ರದ ಸಂಸ್ಕೃತಿ ಸಚಿವ ಸುಧೀರ್ ಮುಂಗಂತಿವಾರ್ ಮಂಗಳವಾರ ಲಂಡನ್ಗೆ ಆಗಮಿಸಲಿದ್ದು, ಆಯುಧವನ್ನು ಹಿಂದಿರುಗಿಸುವ ಕುರಿತು ಮ್ಯೂಸಿಯಂನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಿದ್ದಾರೆ. ಈ ಬಗ್ಗೆ ಮಾತನಾಡಿ “ಮೊದಲ ಹಂತದಲ್ಲಿ, ನಾವು ಶಿವಾಜಿ ಮಹಾರಾಜರ ವಾಘ್ ನಖ್ (ವ್ಯಾಘ್ರನಖ) ಅನ್ನು ಮರಳಿ ತರುತ್ತಿದ್ದೇವೆ. ಅದನ್ನು ನವೆಂಬರ್ನಲ್ಲಿ ಇಲ್ಲಿಗೆ ತರಬೇಕು ಮತ್ತು ಅದಕ್ಕಾಗಿ ನಾವು ಎಂಒಯು (ಒಪ್ಪಂದ)ಗೆ ಸಹಿ ಹಾಕುತ್ತಿದ್ದೇವೆ.
ಛತ್ರಪತಿ ಶಿವಾಜಿ ಮಹಾರಾಜರು ಅಫ್ಜಲ್ ಖಾನ್ ಕರುಳನ್ನು ಕಿತ್ತೊಗೆದ ದಿನದಂದು ಅದನ್ನು ತರುವುದು ನಮ್ಮ ಪ್ರಯತ್ನ” ಎಂದು ಸಚಿವ ಮುಂಗಂತಿವಾರ್ ಹೇಳಿದ್ದಾರೆ.