ನ್ಯೂಸ್ ನಾಟೌಟ್ : ಅಜ್ಜ ಮೊಬೈಲ್ ಕೊಡಿಸದಕ್ಕೆ ಯುವಕನೋರ್ವ ವಿಷ ಸೇವಿಸಿ ತನ್ನ ಬದುಕನ್ನೇ ಕತ್ತಲು ಮಾಡಿಕೊಂಡಿರುವ ದಾರುಣ ಘಟನೆ ವರದಿಯಾಗಿದೆ.ಯಶವಂತ(20) ಯುವಕ ಈ ಕೃತ್ಯವೆಸಗಿಕೊಂಡ ಯುವಕ.
ಈ ದುರ್ಘಟನೆ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ಕೊಳಾಳ್ ಗ್ರಾಮದಿಂದ ವರದಿಯಾಗಿದೆ.ಕಳೆದ ವಾರ ಅಕ್ಟೋಬರ್ 8ರಂದು ಚಿತ್ರದುರ್ಗದಲ್ಲಿ ನಡೆದ ಹಿಂದೂ ಮಹಾಗಣಪತಿ ವಿಸರ್ಜನೆ ಹಬ್ಬದ ವೇಳೆ ಲಕ್ಷಾಂತರ ಜನರು ಸೇರಿದ್ದರು. ಈ ಶೋಭಾಯಾತ್ರೆಯಲ್ಲಿ ಭಾಗಿಯಾಗಿದ್ದ ಯುವಕ ಲಕ್ಷಾಂತರ ಜನ ಸೇರಿರುವ ಶೋಭಾಯಾತ್ರೆ ವೇಳೆ ನೂಕುನುಗ್ಗಲಿನಲ್ಲಿ ಮೊಬೈಲ್ ಕಳೆದುಕೊಂಡಿದ್ದಾನೆ.
ಮನೆಗೆ ಬಂದ ಯುವಕನಿಗೆ ಮೊಬೈಲ್ ಇಲ್ಲದೆ ಬೇಜಾರಾಗಿದೆ.ದಿನ ಬಿಟ್ಟು ಹೊಸ ಮೊಬೈಲ್ ಕೊಡಿಸುವಂತೆ ಅಜ್ಜನಿಗೆ ಒತ್ತಾಯ ಮಾಡಿದ್ದ ಎನ್ನಲಾಗಿದೆ. ಇದೇ ದಿನ ಬೇಕು ಅಂತಾ ಹಟಕ್ಕೆ ಬಿದ್ದ ಮೊಮ್ಮಗ ಮತ್ತೆ ಮತ್ತೆ ಅಜ್ಜನನ್ನು ಪೀಡಿಸುತ್ತಲೇ ಇದ್ದ. ಆದರೆ ರೈತಾಪಿ ಕುಟುಂಬ,ಸರಿಯಾದ ಸಮಯಕ್ಕೆ ಮಳೆ ಬಾರದೇ ಬೆಳೆ ಬಂದಿಲ್ಲ.ಇದರಿಂದ ಆರ್ಥಿಕ ಸಂಕಷ್ಟ ಎದುರಾಗಿದೆ.ಇಂತಹ ಸಂದರ್ಭದಲ್ಲಿ ಸಾವಿರಾರು ರೂ.ನ ಮೊಬೈಲ್ ಖರೀದಿಸೋದಂದ್ರೆ ಸವಾಲೇ ಸರಿ.
ಹೀಗಾಗಿ ಅಜ್ಜ ಮೊಮ್ಮಗನಿಗೆ ಸಮಾಧಾನ ಹೇಳಿದ್ದಾರೆ. ಸ್ವಲ್ಪ ದಿನ ಕಳೆಯಲಿ ಈರುಳ್ಳಿ ಬೆಳೆ ಬಂದ ಬಳಿಕ ಕೊಡಿಸೋಣ ಅಂತಾ ಸಮಾಧಾನ ಮಾಡಿದ್ದ ಅಜ್ಜ.ಆದರೆ ಬೆಳೆ ಬರುವವರೆಗೆ ಕಾಯದ ಮೊಮ್ಮಗ ಮೊಬೈಲ್ ನೆನಪಲ್ಲೇ ಇದ್ದ.ಅಕ್ಟೋಬರ್ 18ರಂದು ಮನೆಯಲ್ಲಿ ಯುವಕ ರಾಸಾಯನಿಕ ಸೇವಿಸಿದ್ದಾನೆ.ವಿಷಯ ತಿಳಿದು ಕೂಡಲೇ ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದರೆ ಯುವಕನ ಆರೋಗ್ಯ ಸ್ಥಿತಿ ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗೆ ದಾವಣಗೆರೆ ಸಾಗಿಸಲಾಯಿತು.ಈ ವೇಳೆ ಮಾರ್ಗ ಮಧ್ಯೆ ಯುವಕ ದುರಂತ ಅಂತ್ಯ ಕಂಡಿದ್ದಾನೆ. ಈ ಘಟನೆ ಸಂಬಂಧ ಚಿತ್ರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
ಮೊಬೈಲ್ ಗೀಳು ಹೆಚ್ಚಿನ ಯುವಕರನ್ನು ದಾರಿ ತಪ್ಪಿಸುತ್ತಿದೆ.ಈ ಬಗ್ಗೆ ಪೋಷಕರು ಎಚ್ಚೆತ್ತುಕೊಳ್ಳಬೇಕಾದ ಅನಿವಾರ್ಯತೆ ಇದೆ.ಸಣ್ಣ ಕಂದಮ್ಮಗಳ ಕೈಯನ್ನೂ ಕೂಡ ಮೋಬೈಲ್ ಇಂದು ಆಕ್ರಮಿಸಿಕೊಂಡಿದೆ.ಒಮ್ಮೆ ಮಕ್ಕಳು ಅಥವಾ ಯುವಕರು ಮೊಬೈಲ್ ವ್ಯಸನಕ್ಕೆ ತುತ್ತಾದರೆಂದರೆ ಅವರಿಗೆ ಮೊಬೈಲ್ ಇಲ್ಲದೆ ಒಂದು ಕ್ಷಣವೂ ಬದುಕಲಾಗುವುದಿಲ್ಲ. ಹೀಗಾಗಿ ಅಂಥ ಮಕ್ಕಳ ಬಗ್ಗೆ ಜಾಗೃತರಾಗುವುದು ಒಳಿತು.