ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಸಾಕು ಪ್ರಾಣಿಗಳು ಬೀದಿಗೆ ಬಂದು ಜನರಿಗೆ ವಿಪರೀತ ತೊಂದರೆ ನೀಡುತ್ತಿವೆ. ಸಾರ್ವಜನಿಕ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿ ಓಡುವ ಮೂಲಕ ವಾಹನ ಸವಾರರಿಗೆ ಕಿರಿಕಿರಿಯುಂಟು ಮಾಡುತ್ತಿವೆ. ಇದರಿಂದ ಎಷ್ಟೋ ಸಲ ವಾಹನ ಅಪಘಾತದಂತಹ ಪ್ರಕರಣಗಳು ಕೂಡ ವರದಿಯಾಗುತ್ತಿದೆ. ಇಂತಹ ಸಂದರ್ಭದಲ್ಲಿ ಇದೇ ಮೊದಲ ಬಾರಿಗೆ ಸುಳ್ಯ ತಾಲೂಕಿನ ಸಂಪಾಜೆ ಗ್ರಾಮ ಪಂಚಾಯತ್ ಸಾರ್ವಜನಿಕ ರಸ್ತೆಗೆ ಸಾಕು ಪ್ರಾಣಿಗಳನ್ನು ಬಿಡುವವರಿಗೆ 2 ಸಾವಿರ ರೂ. ದಂಡ ವಿಧಿಸುವ ಕಠಿಣ ನಿರ್ಧಾರಕ್ಕೆ ಬರಲಾಗಿದೆ.
ದನ, ಆಡು ಸೇರಿದಂತೆ ಪ್ರಾಣಿಗಳು ಇತ್ತೀಚಿನ ದಿನಗಳಲ್ಲಿ ಸಾರ್ವಜನಿಕ ರಸ್ತೆಗಳಿಗೆ ನುಗ್ಗಿಕೊಂಡು ಬರುತ್ತಿದ್ದು ವಾಹನ ಸವಾರರರಿಗೆ ಕಿರಿಕಿರಿ ಆಗುತ್ತಿದೆ. ಜೊತೆಗೆ ಕೃಷಿಕರ ಕೃಷಿಯನ್ನೂ ಹಾನಿ ಮಾಡುತ್ತಿವೆ. ಕೆಲವು ಗೋವುಗಳು ರಾತ್ರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಲಗಿ ನಿದ್ರಿಸಿ ಘನ ವಾಹನಗಳ ಅಡಿಗೆ ಬಿದ್ದು ಪ್ರಾಣ ಕಳೆದುಕೊಂಡಿವೆ. ಇಂತಹ ಸನ್ನಿವೇಶದಲ್ಲಿ ಮಾಲೀಕರಿಗೆ 2 ಸಾವಿರ ರೂ. ದಂಡ ವಿಧಿಸುವ ನಿಯಮವನ್ನು ಜಾರಿಗೆ ತರುವುದಕ್ಕೆ ಒಕ್ಕೊರಲಿನಿಂದ ನಿರ್ಧರಿಸಲಾಗಿದೆ.
ಇದರ ಜೊತೆಗೆ ರಾಷ್ಟ್ರೀಯ ಹೆದ್ದಾರಿ ಸುರಕ್ಷತೆ ದೃಷ್ಟಿಯಿಂದ ಹಾಗೂ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ರಸ್ತೆಯ 2 ಬದಿಗಳಲ್ಲಿ ಫೂಟ್ ಬಾತ್ ಮೇಲೆ ಇರುವ ಬೋರ್ಡ್ ಇನಿತ್ತರ ಒತ್ತುವರಿ ತೆರವು ಗೊಳಿಸುವುದಕ್ಕೂ ತೀರ್ಮಾನಿಸಲಾಗಿದೆ. ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಮತಿ ಶಕ್ತಿವೇಲು, ಉಪಾಧ್ಯಕ್ಷ ಎಸ್. ಕೆ. ಹನೀಫ್ ನೇತೃತ್ವದಲ್ಲಿ ಹಲವು ನಿರ್ಣಯವನ್ನು ಕೈಗೊಳ್ಳಲಾಗಿದೆ. ಸದಸ್ಯರಾದ ಜಿ. ಕೆ. ಹಮೀದ್ ಗೂನಡ್ಕ, ಸುಂದರಿ ಮುಂಡಡ್ಕ, ಜಗದೀಶ್ ರೈ, ಅಬೂಸಾಲಿ, ಶೌವಾದ್ ಗೂನಡ್ಕ, ವಿಜಯ ಕುಮಾರ್, ವಿಮಲಾ ಪ್ರಸಾದ್, ರಜನಿ ಶರತ್, ಸುಶೀಲ, ಅನುಪಮಾ ಉಪಸ್ಥಿತರಿದ್ದರು.