ನ್ಯೂಸ್ ನಾಟೌಟ್ : ಕಳೆದ ಹತ್ತಾರು ತಿಂಗಳುಗಳಿಂದ ಕಾಡಾನೆಗಳ ಉಪಟಳವಿಲ್ಲದೆ ನಿಶ್ಚಿಂತೆಯಿಂದಿದ್ದ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ದೇವರಗುಂಡ ನಿವಾಸಿಗಳ ತೋಟಕ್ಕೆ ಇದೀಗ ಮತ್ತೆ ಕಾಡಾನೆಗಳು ಲಗ್ಗೆಯಿಟ್ಟು, ಅಪಾರ ಪ್ರಮಾಣದ ಕೃಷಿಯನ್ನು ನಾಶ ಮಾಡಿವೆ.
ಈ ಭಾಗದ ಕೃಷಿಕರಾದ ಬಾಲಚಂದ್ರ ದೇವರಗುಂಡ, ಡಿ. ವಿ. ಸುರೇಶ್ ದೇವರಗುಂಡ, ಉಮೇಶ್ ದೇವರಗುಂಡ, ಕೇಶವ ದೇವರಗುಂಡ, ಮುಕುಂದ ದೇವರಗುಂಡ, ನಾಗೇಶ್ ದೇವರಗುಂಡ, ತಿಮ್ಮಪ್ಪ ದೇವರಗುಂಡ, ಆಶಿಕ್ ದೇವರಗುಂಡ ಇವರ ತೋಟಗಳಿಗೆ ಆನೆ ದಾಳಿ ಮಾಡಿ ಅನೇಕ ಅಡಕೆ ಮರಗಳು, ತೆಂಗು ಮತ್ತು ಬಾಳೆ ಗಿಡಗಳನ್ನು ಕಿತ್ತು ಹಾಕಿವೆ.
ಕಳೆದ ವರ್ಷ ದೇವರಗುಂಡದಲ್ಲಿ ತೋಟಗಳಿಗೆ ಸತತವಾಗಿ ಆನೆಗಳು ದಾಳಿ ಮಾಡಿ ಅಲ್ಲೇ ಹತ್ತಿರದ ಕಾಡಿನಲ್ಲಿ ಬೀಡುಬಿಟ್ಟಿದ್ದವು. ಆಗ ಆ ಭಾಗದ ಕೃಷಿಕರು ಕೇಂದ್ರ ಸರಕಾರದ ಯೋಜನೆಯಾದ ಖಾದಿ ಮತ್ತು ಗ್ರಾಮದ್ಯೋಗ ಇಲಾಖೆಯಿಂದ ಮತ್ತು ಸುಳ್ಯ ಜೇನು ಸೊಸೈಟಿ ವತಿಯಿಂದ ಕೃಷಿ ಹಾನಿಗೀಡಾದವರಿಗೆ ತಲಾ 10 ಜೇನು ಪೆಟ್ಟಿಗೆ ಕುಟುಂಬ ಸಮೇತ ನೀಡಿದ್ದಾರೆ. ಅದನ್ನು ಆನೆ ಬರುವ ದಾರಿಗೆ ಅಡ್ಡಲಾಗಿ ಒಂದಕ್ಕೊಂದು ಜೋಡಣೆ ಮಾಡಿ ಇರಿಸಲಾಗಿತ್ತು. ಇದು ಯಶಸ್ವಿಯಾಗಿತ್ತು. ಬಳಿಕ ಆನೆಗಳು ಇತ್ತ ಕಡೆ ದಾಳಿ ಮಾಡಿಲ್ಲ ಎನ್ನುತ್ತಾರೆ ಇಲ್ಲಿನ ಸ್ಥಳೀಯರು.
ದೇವರಗುಂಡದಲ್ಲಿ ಪ್ರತಿ ಬಾರಿ ಆನೆ ಹಿಂಡು ಬರುವ ಮಾರ್ಗದಲ್ಲಿ ಕೃಷಿಕರು ಜೇನು ಪೆಟ್ಟಿಗೆ ಇಟ್ಟ ಕಾರಣ ಇದೀಗ ಆನೆಗಳು ತಮ್ಮ ದಾರಿ ಬದಲಿಸಿ ಬೇರೆ ದಾರಿಯಿಂದ ಸತತವಾಗಿ ಕಳೆದ ಎರಡು ದಿನಗಳಿಂದ ದಾಳಿ ಮಾಡಲು ಪ್ರಾರಂಭಿಸಿವೆ. ಆದ್ದರಿಂದ ಆ ಭಾಗದ ಕೃಷಿಕರ ನೆಮ್ಮದಿ ಕೆಡಿಸಿವೆ. ಅರಣ್ಯ ಇಲಾಖೆಗೆ ಮಾಹಿತಿ ನೀಡಿದಾಗ ಬಂದು ಓಡಿಸುತ್ತಾರೆ. ಆದರೆ ಹಗಲು ಹೊತ್ತಿನಲ್ಲಿ ಹೊಳೆಯಿಂದ ಆಚೆ ಕೇಣಾಜೆ ಕಾಡಿನಲ್ಲಿ ಇದ್ದುಕೊಂಡು ಸಂಜೆಯಾಗುತ್ತಲೇ ಹೊಳೆ ದಾಟಿ ಮತ್ತೆ ದೇವರಗುಂಡ ಭಾಗಕ್ಕೆ ಬಂದು ಕೃಷಿಯನ್ನು ಹಾನಿ ಮಾಡುತ್ತದೆ.
ಮನುಷ್ಯ ಮತ್ತು ಕಾಡು ಪ್ರಾಣಿಗಳ ನಡುವಿನ ಸಂಘರ್ಷ ದಿನೇ ದಿನ ಹೆಚ್ಚಾಗುತ್ತಿವೆ. ಇದರಿಂದ ಜನರ ಜೀವ ಮತ್ತು ಕೃಷಿಗೂ ಹಾನಿಯಾಗುತ್ತಿದೆ. ಈ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳು ಅಗತ್ಯ ಕ್ರಮಕೈಗೊಂಡು ದೇವರಗುಂಡದ ಕೃಷಿಕರ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವಂತೆ ಒತ್ತಾಯಿಸಿದ್ದಾರೆ.