ನ್ಯೂಸ್ ನಾಟೌಟ್: ಭಾರತ ತಂಡದ ಮಾಜಿ ಆರಂಭಿಕ ಬ್ಯಾಟ್ಸ್ ಮನ್ ಹಾಲಿ ಬಿಜೆಪಿ ಸಂಸದ ಗೌತಮ್ ಗಂಭೀರ್ (Gautham Gambhir) ಪ್ರತಿ ಸಲವೂ ಭಾರತ ತಂಡದ ಮಾಜಿ ನಾಯಕ ಎಂ.ಎಸ್ . ಧೋನಿಯನ್ನು ಟೀಕಿಸಿರುವುದನ್ನು ನೋಡಿದ್ದೇವೆ. ಆದರೆ ಇದೀಗ ಕ್ರಿಕೆಟ್ ವಲಯದಲ್ಲೊಂದು ಅಚ್ಚರಿಯ ಬೆಳವಣಿಗೆ ನಡೆದಿದೆ. ಸ್ವತಃ ಗೌತಮ್ ಗಂಭೀರ್ ಈಗ ಧೋನಿಯನ್ನು ಮನಸೋ ಇಚ್ಛೆ ಹೊಗಳಿದ್ದಾರೆ. ಮಾತ್ರವಲ್ಲ ಧೋನಿ ತ್ಯಾಗಮಯಿ ಎಂದು ತಿಳಿಸಿದ್ದಾರೆ. ಈ ಬೆನ್ನಲ್ಲೇ ಅಭಿಮಾನಿಗಳು ಸೂರ್ಯ ಯಾವ ಕಡೆಯಿಂದ ಉದಯಿಸಿದ್ದಾನೆ ಎಂದು ಅನುಮಾನದ ದೃಷ್ಟಿಯಲ್ಲಿ ನೋಡುವುದಕ್ಕೆ ಶುರು ಮಾಡಿದ್ದಾರೆ.
ಗಂಭೀರ್ ಧೋನಿ ಬಗ್ಗೆ ಹೇಳಿದ್ದೇನು..?
ಸಾಂಪ್ರದಾಯಿಕ ಕ್ರಿಕಟಿಗರನ್ನು ಮೀರುವ ವಿಶಿಷ್ಟ ಸಾಮರ್ಥ್ಯ ಧೋನಿಗೆ ಇತ್ತು. ಮಾಜಿ ನಾಯಕ ಭಾರತೀಯ ಕ್ರಿಕೆಟ್ನಲ್ಲಿ ಪರಿವರ್ತಕ ವ್ಯಕ್ತಿ ಎಂದು ಗಂಭೀರ್ ಹೇಳಿದರು. ವಿಕೆಟ್ ಕೀಪರ್ಗಳು ಐತಿಹಾಸಿಕವಾಗಿ ಸ್ಪಂಪ್ಗಳ ಹಿಂದಿನ ಪರಾಕ್ರಮ ಮತ್ತು ನಂತರ ಅವರ ಬ್ಯಾಟಿಂಗ್ ಕೌಶಲ್ಯಕ್ಕೆ ಹೆಸರು ವಾಸಿಯಾಗಿರುತ್ತಾರೆ. ಆದರೆ ಧೋನಿ ಮೊದಲು ಬ್ಯಾಟ್ಸ್ ಮನ್ ಮತ್ತು ಎರಡನೆಯದಾಗಿ ವಿಕೆಟ್ ಕೀಪರ್ ಆಗಿ ಎಂದು ಗಂಭೀರ್ ಹೇಳಿದ್ದಾರೆ. ಎಂಎಸ್ ಧೋನಿ 7ನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಿದ್ದರು. ಆ ಕ್ರಮಾಂಕದಲ್ಲಿ ಪಂದ್ಯಗಳನ್ನು ಗೆಲ್ಲಿಸಬಲ್ಲ ವಿಕೆಟ್ ಕೀಪರ್- ಸಿಕ್ಕಿದ್ದು ಭಾರತೀಯ ಕ್ರಿಕೆಟ್ಗೆ ಒಂದು ಆಶೀರ್ವಾದ ಎಂದು ಗಂಭೀರ್ ಹೇಳಿದ್ದಾರೆ.
ಕೆಂಡದಂತಹ ಕೋಪ..!
ಈ ಹಿಂದೆ ಧೋನಿಯನ್ನು ಅವಕಾಶ ಸಿಕ್ಕಾಗೆಲ್ಲ ಗಂಭೀರ್ ಹಿಗ್ಗಾಮುಗ್ಗ ಜರೆದಿದ್ದರು. ಅದರಲ್ಲೂ ವಿಶೇಷವಾಗಿ 2011 ರ ಐಸಿಸಿ ಕ್ರಿಕೆಟ್ ವಿಶ್ವಕಪ್ ಫೈನಲ್ನಲ್ಲಿ ಎಲ್ಲರಿಗೂ ಸಿಗಬೇಕಾದ ಪ್ರಶಂಸೆಯನ್ನು ಧೋನಿ ತಾವೊಬ್ಬರೇ ತೆಗೆದುಕೊಂಡಿದ್ದಾರೆ ಎಂದು ಟೀಕಿಸುತ್ತಿದ್ದರು. ಆ ಪಂದ್ಯದಲ್ಲಿ ಧೋನಿ ಅಜೇಯ 91 ರನ್ ಬಾರಿಸುವ ಜತೆಗೆ ವಿನ್ನಿಂಗ್ ಸಿಕ್ಸರ್ ಸಿಡಿಸಿದ್ದರು. ಜನಮಾನಸದಲ್ಲಿ ಅದು ಅಚ್ಚಳಿಯದೇ ಉಳಿದ ಕಾರಣ ಗೆಲುವಿನ ಪ್ರಶಂಸೆ ಧೋನಿಗೆ ಹೆಚ್ಚಾಗಿ ಸಿಕ್ಕಿತ್ತು. ಅದೇ ಪಂದ್ಯದಲ್ಲಿ 97 ರನ್ ಬಾರಿಸಿದ ತಮಗೆ ಆ ಕ್ರೆಡಿಟ್ ಸಿಗಲಿಲ್ಲ ಎಂಬ ಕೊರಗು ಗಂಭೀರ್ ಅವರದ್ದು. ಅದಕ್ಕಾಗಿ ಅವರು ಧೋನಿ ವಿರುದ್ಧ ಆಗಾಗ ತಿರುಗಿ ಬೀಳುತ್ತಿದ್ದು. ಇದೀಗ ಅಚ್ಚರಿ ಎಂಬಂತೆ ಹೊಗಳಿದ್ದಾರೆ.
ಧೋನಿಯ ನಾಯಕತ್ವದ ಜವಾಬ್ದಾರಿಗಳನ್ನು ವಹಿಸಿಕೊಳ್ಳದೇ ಹೋಗಿದ್ದರೆ ಹಲವಾರು ವೈಯಕ್ತಿಕ ದಾಖಲೆ ಮಾಡಬಹುದಾಗಿತ್ತು. ಅವರ ಜವಾಬ್ದಾರಿಗಳು ವೈಯಕ್ತಿಕ ಬ್ಯಾಟಿಂಗ್ ಸಾಧನೆಗಳನ್ನು ಮರೆ ಮಾಡಿವೆ ಎಂದು ಗಂಭೀರ್ ಇದೀಗ ಹೇಳಿದ್ದಾರೆ. ಧೋನಿ ನಾಯಕತ್ವದಲ್ಲಿರದಿದ್ದರೆ ಅವರು ಹಲವಾರು ಏಕದಿನ ದಾಖಲೆಗಳನ್ನು ಸೃಷ್ಟಿಸಬಹುದಾಗಿತ್ತು ಎಂದು ಗಂಭೀರ್ ತಿಳಿಸಿದ್ದಾರೆ.