ನ್ಯೂಸ್ ನಾಟೌಟ್: ಭಾರತ ತಂಡದ ತಾರಾ ಆಟಗಾರ ಕಿಂಗ್ ವಿರಾಟ್ ಕೊಹ್ಲಿ ಏಷ್ಯಾಕಪ್ ನ(Asia Cup 2023) ಸೂಪರ್ 4 ಹಂತದ ಪಂದ್ಯದಲ್ಲಿ ಭಾನುವಾರ ಪಾಕಿಸ್ತಾನ(IND vs PAK) ವಿರುದ್ಧದ ಮೊದಲ ಪಂದ್ಯವನ್ನಾಡಲು ಸಜ್ಜಾಗಿದ್ದಾರೆ.
ಟೀಮ್ ಇಂಡಿಯಾ 2023ರ ಉಭಯ ತಂಡಗಳ ನಡುವಿನ ಗುಂಪು ಹಂತದ ಪಂದ್ಯ ಮಳೆಯಿಂದ ರದ್ದುಗೊಂಡಿತ್ತು. ಇದೀಗ ದ್ವಿತೀಯ ಸುತ್ತಿನ ಮುಖಾಮುಖಿ ಸಂಪೂರ್ಣವಾಗಿ ನಡೆಯಲಿ ಎನ್ನುವುದು ಅಭಿಮಾನಿಗಳ ಆಸೆಯಾಗಿದೆ. ಈ ಪಂದ್ಯಕ್ಕೆ ಅಭ್ಯಾಸ ನಡೆಸುತ್ತಿದ್ದ ವೇಳೆ ವಿರಾಟ್ ಕೊಹ್ಲಿ(Virat Kohli) ಅವರು ಮೈದಾನಕ್ಕೆ ಬಂದ ನಾಯಿ ಮರಿಯೊಂದಿಗೆ (Virat Kohli Plays With Puppy) ಕೆಲ ಕಾಲ ಆಟವಾಡಿದ್ದಾರೆ. ಈ ವಿಡಿಯೊ ವೈರಲ್(Viral Video) ಆಗಿದೆ.
ಶುಕ್ರವಾರ ಟೀಮ್ ಇಂಡಿಯಾ ಆಟಗಾರರು ಅಭ್ಯಾಸದಲ್ಲಿ ತೊಡಗಿದ್ದರು. ಎಲ್ಲ ಆಟಗಾರರು ಫುಟ್ಬಾಲ್ ಆಡುತ್ತಿರುವಾಗ ನಾಯಿ ಮರಿಯೊಂದು ಮೈದಾನಕ್ಕೆ ನುಗ್ಗಿತು. ಇದೇ ವೇಳೆ ಮುದ್ದಾದ ನಾಯಿ ಮರಿಯನ್ನು ಕಂಡ ವಿರಾಟ್ ಕೊಹ್ಲಿ ಮತ್ತು ಕೆಲ ಆಟಗಾರರು ಅದನ್ನು ಮುದ್ದು ಮಾಡಿದ್ದಾರೆ. ಕೈಯಲ್ಲಿ ಎತ್ತಿಕೊಂಡು ಬೆನ್ನು ಸವರಿದ್ದಾರೆ. ಅಲ್ಲದೆ ಈ ನಾಯಿ ಮರಿಯು ಫುಟ್ಬಾಲ್ ಹಿಂದೆ ಓಡುತ್ತಾ ಆಟವಾಡಿದೆ. ಈ ವಿಡಿಯೊ ಕಂಡ ಅನೇಕರು ಪ್ರಾಣಿ ಪ್ರೀತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದೇ ವರ್ಷ ಮಾರ್ಚ್ನಲ್ಲಿ ವಿರಾಟ್ ಕೊಹ್ಲಿ ಅವರು ತಮ್ಮ ಪತ್ನಿಯೊಂದಿಗೆ ಉಜ್ಜಯಿನಿಯ ಮಹಾಕಾಳೇಶ್ವರ ದೇಗುಲಕ್ಕೆ ಭೇಟಿ ನೀಡಿದ್ದರು. ಬಳಿಕ ಮಹಾಳೇಶ್ವರ ಜ್ಯೋತಿರ್ಲಿಂಗಕ್ಕೆ ನಡೆಯುವ ಭಸ್ಮ ಆರತಿಯಲ್ಲಿ ಕೊಹ್ಲಿ ಮತ್ತು ಅನುಷ್ಕಾ ಪಾಲ್ಗೊಂಡಿದ್ದರು. ಇದೇ ವೇಳೆ ಕೊಹ್ಲಿ ದೇಗುಲದ ಹೊರ ಭಾಗದಲ್ಲಿ ಸಿಕ್ಕ ಪುಟ್ಟ ನಾಯಿ ಮರಿಯೊಂದಿಗೆ ಮುದ್ದಾಡಿ ಫೋಟೊ ಹಂಚಿಕೊಂಡಿದ್ದರು. ಈ ಫೋಟೊ ದಾಖಲೆಯ ವೀಕ್ಷಣೆ ಜತೆಗೆ ಎಲ್ಲಡೆ ವೈರಲ್ ಆಗಿತ್ತು. ಇದೀಗ ಕೊಲಂಬೋದಲ್ಲಿಯೂ ಕೊಹ್ಲಿ ನಾಯಿ ಮರಿಯೊಂದಿಗೆ ಮುದ್ದಾಡಿದ ಫೋಟೊ ವೈರಲ್ ಆಗಿದೆ.
ಪಾಕ್ ವಿರುದ್ಧ ಮೊದಲ ಪಂದ್ಯದಲ್ಲಿ ಕೇವಲ ನಾಲ್ಕು ರನ್ಗೆ ಔಟಾಗಿದ್ದ ವಿರಾಟ್ ಕೊಹ್ಲಿ ಭಾನುವಾರದ ಪಂದ್ಯದಲ್ಲಿ ಶ್ರೇಷ್ಠ ಬ್ಯಾಟಿಂಗ್ ಪ್ರದರ್ಶನ ತೋರಿವ ವಿಶ್ವಾಸದಲ್ಲಿದ್ದಾರೆ. ಅಲ್ಲದೆ ಕೆಲವು ದಾಖಲೆಯನ್ನು ನಿರ್ಮಿಸುವ ಅವಕಾಶ ಅವರ ಮುಂದಿದೆ. ಆದರೆ ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಒಂದೊಮ್ಮೆ ಮಳೆ ಬಂದರೂ ಪಂದ್ಯಕ್ಕೆ ಮೀಸಲು ದಿನ ಇರಲಿದೆ. ಹೀಗಾಗಿ ಅಭಿಮಾನಿಗಳು ಚಿಂತೆ ಪಡುವ ಅವಶ್ಯಕತೆ ಇಲ್ಲ.