ನ್ಯೂಸ್ ನಾಟೌಟ್ : ಮನೆಯಲ್ಲಿ ಹಣವಿಟ್ಟರೆ ಕಳ್ಳರ ಭಯ.ಯಾವುದಕ್ಕೂ ಅದು ಸೇಫ್ ಅಲ್ಲ ಅಂತ ಹೇಳಿ ಬ್ಯಾಂಕ್ನಲ್ಲೇ ಇದ್ದರೆ ಸೇಫ್ ಅಂತ ಧೈರ್ಯದಿಂದ ಇರುತ್ತೇವೆ.ಆದ್ರೆ ಇಲ್ಲೇನಾಗಿದೆ ನೋಡಿ. ತಮ್ಮ ಮಗಳ ಮದುವೆಗೆಂದು ಬ್ಯಾಂಕ್ನಲ್ಲಿ ಕೂಡಿಟ್ಟ ೧೮ ಲಕ್ಷ ರೂ.ಏನಾಗಿದೆ ಅಂತ ನೀವೇ ಓದಿ..
ಇದೊಂದು ಆಶ್ಚರ್ಯಚಕಿತಗೊಳಿಸುವ ಮತ್ತು ಆಘಾತಕಾರಿ (shocking News) ಸಂಗತಿ ಎಂದೇ ಹೇಳಬಹುದು.ಉತ್ತರ ಪ್ರದೇಶದ ಮೊರಾದಾಬಾದ್ನಲ್ಲಿ ತಮ್ಮ ಮಗಳ ಮದುವೆಗಾಗಿ ತೆಗೆದಿರಿಸಿದ್ದ 18 ಲಕ್ಷ ರೂಪಾಯಿ ಹಣವನ್ನು ಬ್ಯಾಂಕ್ ಲಾಕರ್ನಲ್ಲಿ ಮಹಿಳೆಯೊಬ್ಬರು ಜೋಪಾನವಾಗಿ ಇಟ್ಟಿದ್ದರು.ಹಲವು ದಿನಗಳ ಬಳಿಕ ಲಾಕರ್ ತೆಗೆದು ನೋಡಿದಾಗ ಅವರಿಗೆ ಬಿಗ್ ಶಾಕ್ ಕಾದಿತ್ತು.ಯಾಕೆಂದ್ರೆ ಅವರು ಕೂಡಿಟ್ಟ ಹಣ ಮಾಯವಾಗಿತ್ತು. ಅಂದ್ರೆ ಅಷ್ಟೂ ಹಣವನ್ನು ಗೆದ್ದಲು ತಿಂದು ಮುಗಿಸಿತ್ತು! ಬ್ಯಾಂಕ್ ಆಫ್ ಬರೋಡಾದ ಶಾಖೆಯಲ್ಲಿ ಈ ಘಟನೆ ನಡೆದಿದೆ.
ಅರೆ! ಇದು ನಂಬುವುದಕ್ಕೆ ಅಸಾಧ್ಯವಾದರೂ ಇದು ನೈಜ ಘಟನೆ.ಅಲ್ಕಾ ಪಾಠಕ್ ಎಂಬವರು ಬ್ಯಾಂಕ್ ಆಫ್ ಬರೋಡಾದ ರಾಮಗಂಗಾ ವಿಹಾರ್ ಶಾಖೆಯ ಲಾಕರ್ನಲ್ಲಿ ಚಿನ್ನಾಭರಣಗಳ ಜೊತೆಗೆ ಹಣವನ್ನು ಇರಿಸಿದ್ದು,ಮಗಳ ಮದುವೆ ಬಗ್ಗೆ , ಆಕೆಯ ಭವಿಷ್ಯದ ಬಗ್ಗೆ ನೂರಾರು ಕನಸುಗಳನ್ನು ಹೊತ್ತು ತಮ್ಮ ಮಗಳ ಮದುವೆಗಾಗಿ ಈ ಹಣವನ್ನು ಉಳಿಸಿದ್ದರು. ಕೆಲವು ತಿಂಗಳ ಬಳಿಕ ಹಣ ತೆಗೆಯಲು ಬ್ಯಾಂಕ್ಗೆ ಹೋದ ಮಹಿಳೆ ಇದನ್ನು ನೋಡಿ ತಮ್ಮ ಜೀವವೇ ಹೋಯ್ತೆನೋ ಅನಿಸಿಬಿಟ್ಟಿದೆ.ತಾಯಿಗೆ ತನ್ನ ಮಕ್ಕಳೇ ಸರ್ವಸ್ವ.ಅವರ ಭವಿಷ್ಯ ಚೆನ್ನಾಗಿರಬೇಕೆಂದು ಬಯಸಿ ಬ್ಯಾಂಕ್ನಲ್ಲಿ ಇಟ್ಟರೆ ಆ ಕೂಡಿಟ್ಟ ಹಣಕ್ಕೆ ಯಾರು ಹೊಣೆ?
ಸದ್ಯ ಬ್ಯಾಂಕ್ ಅಧಿಕಾರಿಗಳಿಂದ ಈ ವಿಚಾರದಲ್ಲಿ ತನಿಖೆ ನಡೆದಿದೆ.ಉದಯಪುರದಲ್ಲಿಯೂ ಇದೇ ರೀತಿಯ ಗೆದ್ದಲಿನ ಹಾವಳಿಯ ಘಟನೆ ವರದಿಯಾಗಿತ್ತು. ಇದೇ ಫೆಬ್ರವರಿಯಲ್ಲಿ ಉದಯಪುರದ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಶಾಖೆಯಲ್ಲಿ ಲಾಕರ್ನಲ್ಲಿ ಇರಿಸಲಾಗಿದ್ದ 2.15 ಲಕ್ಷ ರೂ.ಗಳನ್ನು ಗೆದ್ದಲುಗಳು ನಾಶಪಡಿಸಿದ ಘಟನೆ ನಡೆದಿತ್ತು. ಹಣದ ಮಾಲೀಕರಾದ ಸುನೀತಾ ಮೆಹ್ತಾ ಅವರು 2 ಲಕ್ಷ ರೂ.ಗಳನ್ನು ಬಟ್ಟೆಯ ಚೀಲದಲ್ಲಿ ಮತ್ತು ಉಳಿದ ಹಣವನ್ನು ಬ್ಯಾಗ್ನ ಹೊರಗೆ ಇಟ್ಟಿದ್ದರು.