ನ್ಯೂಸ್ ನಾಟೌಟ್: ‘ಗೌರಿ ನೆನಪು’ ಕಾರ್ಯಕ್ರಮದಲ್ಲಿ ಮಾತನಾಡಿ ನಟ, ಪ್ರಕಾಶ್ ರಾಜ್ ಹೊಸ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಉದಯನಿಧಿ ಸ್ಟಾಲಿನ್ “ಸನಾತನ ಧರ್ಮವನ್ನು ನಿರ್ಮೂಲನೆ ಮಾಡಬೇಕು” ಎಂದು ಹೇಳಿಕೆ ಕೊಟ್ಟ ಬೆನ್ನಲ್ಲೇ ಹಿಂದು ಧರ್ಮ, ಸನಾತನ ಧರ್ಮ ಎಂಬ ಚರ್ಚೆ ಜೋರಾಗಿದೆ. ಈಗ ಪ್ರಕಾಶ್ ರಾಜ್ ಸ್ಟಾಲಿನ್ ಕೊಟ್ಟ ಹೇಳಿಕೆ ಸರಿ ಎಂಬಂತೆ ಸಮರ್ಥಿಸಿಕೊಂಡಿದ್ದಾರೆ.
‘ಚಂದ್ರಯಾನ 3’ ಸಂಬಂಧಪಟ್ಟಂತೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ಮಾಡಿ ಪೋಸ್ಟ್ ಹಾಕಿದ್ದಕ್ಕೆ ಭಾರೀ ಟ್ರೋಲ್ಗೊಳಗಾಗಿದ್ದ ಪ್ರಕಾಶ್ ರಾಜ್, ಈಗ ಮತ್ತೊಂದು ವಿವಾದಕ್ಕೆ ಸುದ್ದಿಯಾಗಿದ್ದಾರೆ. ಉದಯನಿಧಿ ಸ್ಟಾಲಿನ್ ಹೇಳಿಕೆಯನ್ನು ಸಮರ್ಥಿಸಿಕೊಂಡ ಅವರು, “ನಾನು ಹುಟ್ಟಿರೋದು ನನ್ನ ಅಪ್ಪ-ಅಮ್ಮನಿಗೆ, ಸನಾತನ ಧರ್ಮಕ್ಕೆ ಅಲ್ಲ” ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
ತಮಿಳುನಾಡು ಸಿಎಂ ಸ್ಟಾಲಿನ್ ಪುತ್ರ ಉದಯನಿಧಿ ಅವರು ಇತ್ತೀಚೆಗೆ ನಡೆದ ತಮಿಳುನಾಡಿನ ಕಾರ್ಯಕ್ರಮವೊಂದರಲ್ಲಿ ‘ಹಿಂದು ಧರ್ಮವನ್ನು ನಿರ್ಮೂಲನೆ ಮಾಡಬೇಕು’ ಎಂದು ಹೇಳಿಕೆ ಕೊಟ್ಟರು. ಈ ಒಂದು ಹೇಳಿಕೆ ದೊಡ್ಡ ಸಂಚಲನ ಮೂಡಿಸಿದ್ದು ಪರ-ವಿರೋಧ ಚರ್ಚೆಗಳು ನಡೆಯುತ್ತಿವೆ. ಅದರ ಬೆನ್ನಲ್ಲೇ ಬೆಂಗಳೂರಿನಲ್ಲಿ ನಡೆದ ‘ಗೌರಿ ನೆನಪು’ ಕಾರ್ಯಕ್ರಮದಲ್ಲಿ ನಟ ಪ್ರಕಾಶ್ ರಾಜ್ ಅವರು ‘ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ’ ಎಂದು ಹೇಳಿಕೆ ನೀಡಿದ್ದಾರೆ.
“ನನ್ನ ಕೊಲ್ತೀನಿ, ಹೆಣ ಬೀಳಸ್ತೀನಿ ಅಂತ ಒಬ್ಬರು ಸೋಶಿಯಲ್ ಮೀಡಿಯಾದಲ್ಲಿ ಒಬ್ಬ ವಿಡಿಯೋ ಹಾಕ್ಕೊಂಡಿದ್ದನು. ಅವನ ಜೊತೆ ನಾನು ಒಂದಷ್ಟು ಮಾತುಕತೆ ಮಾಡಿದೆ. ನೀವು ಸನಾತನಿ ಅಂತ ಟ್ವಿಟ್ಟರ್ನಲ್ಲಿ ಹಾಕ್ಕೊಂಡಿದ್ದೀರಂತೆ ಅಂತ ಅವನು ಹೇಳಿದಾಗ ನಾನು ಇಲ್ಲ ಅಂತ ಹೇಳಿದೆ. ಆಗ ಅವನು ಡಿಎಂಕೆ ಅವರು ಹೇಳಿದ್ರು ಅಂತ ಹೇಳಿದಾಗ ನಾನು ಸನಾತನಿ ಅಂತ ಹೇಳಿಲ್ಲ. ನಾನು ಸನಾತನ ಧರ್ಮಕ್ಕೆ ಹುಟ್ಟಿಲ್ಲ, ನಾನು ಅಪ್ಪ-ಅಮ್ಮನಿಗೆ ಹುಟ್ಟಿದೆ, ನಿನಗೆ ಬಯೋಲಜಿ ಗೊತ್ತಿಲ್ಲ ಅಂತ ಹೇಳಿದೆ” ಎಂದು ಪ್ರಕಾಶ್ ರಾಜ್ ಹೇಳಿದ್ದಾರೆ.
“ನಾನು ಮೋದಿ ವಿರುದ್ಧ ಇದ್ದೇನೆ. ಆಡಳಿತ ಪಕ್ಷದಲ್ಲಿರುವವರನ್ನು ನಾವು ಕೇಳಬೇಕು. ಹಾಗಾಗಿ ಮೋದಿ ಅವರನ್ನು ಕೇಳ್ತೀವಿ. ನನಗೆ ಧರ್ಮದ ಬಗ್ಗೆ ಸಮಸ್ಯೆ ಇಲ್ಲ. ಹಾಗಾಗಿ ನಾನು ತನಾತನಿ ಸಂಸತ್ ಅಂತ ಟ್ವಿಟ್ಟರ್ನಲ್ಲಿ ಹಾಕ್ಕೊಂಡಿದೀನಿ. ಸಂಸತ್ನಲ್ಲಿ ಮೋದಿಯವರು ಎಲ್ಲ ಸ್ವಾಮೀಜಿಗಳನ್ನು ಕರೆದುಕೊಂಡು ಹೋಗಿದ್ದಾರೆ. ಮೋದಿಯವರು ಅವರ ಮನೆಯಲ್ಲಿ ಹೋಮ ಮಾಡಿಕೊಳ್ಳಲಿ, ಆದರೆ ನಮ್ಮ ಸಂಸತ್ನಲ್ಲಿ ಯಾಕೆ ಹೋಮ ಮಾಡೋದು ಎಂದು ನೀವು ಪ್ರಶ್ನೆ ಮಾಡಲ್ಲ, ಆದರೆ ನಾನು ಮಾಡ್ತೀನಿ ಅಂತ ನಾನು ಅವನಿಗೆ ಹೇಳಿದೆ” ಎಂದಿದ್ದಾರೆ ಪ್ರಕಾಶ್ ರಾಜ್ ಮತ್ತೆ ಸುದ್ದಿಯಾಗಿದ್ದಾರೆ.