ನ್ಯೂಸ್ ನಾಟೌಟ್ : ಹಿಂದೂ ಧರ್ಮದ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದ ಮೇಲೆ ಉದಯನಿಧಿ ಸ್ಟಾಲಿನ್ ವಿರುದ್ಧ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಹಲವರು ಪ್ರಚೋದನಕಾರಿ ಹೇಳಿಕೆ ನೀಡುತ್ತಿದ್ದು,ಈಗ ಸ್ವಾಮೀಜಿಯೊಬ್ಬರ ಹೇಳಿಕೆ ಭಾರೀ ಚರ್ಚೆಗೆ ಕಾರಣವಾಗಿದೆ.
ಅಯೋಧ್ಯೆಯ ಹಿಂದೂ ಧರ್ಮದರ್ಶಿಯೊಬ್ಬರು ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ತಲೆ ಕಡಿದು ತರುವಂತೆ 10 ಕೋಟಿ ರೂ. ಬಹುಮಾನ ಘೋಷಿಸಿದ್ದಾರೆ. ಪ್ರಚೋದನಕಾರಿ ಹೇಳಿಕೆಗೆ ಹಲವೆಡೆ ಆಕ್ರೋಶ ವ್ಯಕ್ತವಾಗಿದ್ದು, ಹಲವರು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಡಿಎಂಕೆ ಸರ್ಕಾರದಲ್ಲಿ ಯುವ ಕಲ್ಯಾಣ ಮತ್ತು ಕ್ರೀಡಾ ಅಭಿವೃದ್ಧಿ ಸಚಿವರಾಗಿರುವ ಉದಯನಿಧಿ ಸ್ಟಾಲಿನ್ “ಸನಾತನ ಧರ್ಮವು ಸಾಮಾಜಿಕ ನ್ಯಾಯ ಮತ್ತು ಸಮಾನತೆಗೆ ವಿರುದ್ಧವಾಗಿದೆ. ಸನಾತನ ಧರ್ಮವು (Sanatana Dharma) ಡೆಂಗ್ಯೂ, ಮಲೇರಿಯಾ ಇದ್ದಂತೆ. ಅದನ್ನು ನಿರ್ಮೂಲನೆ ಮಾಡಬೇಕೇ ಹೊರತು, ವಿರೋಧಿಸಬಾರದು ಸಮಾವೇಶದಲ್ಲಿ ಹೇಳಿಕೆ ನೀಡಿದ್ದರು.
ಈ ಹೇಳಿಕೆ ರಾಜಕೀಯ ತಿರುವು ಪಡೆದುಕೊಂಡಿದ್ದು, ಬಿಜೆಪಿ ಸೇರಿದಂತೆ ಹಲವು ರಾಜಕೀಯ ಮುಖಂಡರು ಕಟುವಾಗಿ ಟೀಕಿಸಿದ್ದಾರೆ. ಅನೇಕರು ಉದಯನಿಧಿ ಸ್ಟಾಲಿನ್ ಬಂಧನಕ್ಕೆ ಆಗ್ರಹಿಸಿದ್ದಾರೆ.
ಈ ನಡುವೆ ಸ್ವಾಮೀಜಿಯೊಬ್ಬರು ಉದಯ ಸ್ಟಾಲಿನ್ ಅವರ ತಲೆಗೆ 10 ಕೋಟಿ ರೂ. ಘೋಷಿಸಿದ್ದಾರೆ. ಈ ಕುರಿತು ವಿಡಿಯೋ ರಿಲೀಸ್ ಮಾಡಿರುವ ಪರಮಹಂಸ ಆಚಾರ್ಯ ಒಂದು ಕೈಯಲ್ಲಿ ಉದಯನಿಧಿಯ ಪೋಸ್ಟರ್ ಮತ್ತು ಇನ್ನೊಂದು ಕೈಯಲ್ಲಿ ಕತ್ತಿ ಹಿಡಿದುಕೊಂಡು ಡಿಎಂಕೆ ಸಚಿವರ ಸಾಂಕೇತಿಕ ಶಿರ* ಚ್ಛೇದವನ್ನು ಪ್ರದರ್ಶಿಸುವ ವೀಡಿಯೊವನ್ನು ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಉದಯನಿಧಿ ಸ್ಟಾಲಿನ್ ಅವರು ಪ್ರತಿಕ್ರಿಯೆ ನೀಡಿದ್ದು, “ಇಂದು ಸ್ವಾಮಿಯೊಬ್ಬರು ನನ್ನ ತಲೆಗೆ 10 ಕೋಟಿ ರೂಪಾಯಿ ಬಹುಮಾನ ಘೋಷಿಸಿದ್ದಾರೆ. ಅವನು ನಿಜವಾದ ಸಂತನೋ ಅಥವಾ ನಕಲಿಯೋ? ನಿನಗೇಕೆ ನನ್ನ ತಲೆ ತುಂಬಾ ಇಷ್ಟ? ನಿಮಗೆ ಇಷ್ಟೊಂದು ಹಣ ಎಲ್ಲಿಂದ ಬರುತ್ತಿದೆ? ನನ್ನ ಕೂದಲು ಬಾಚಲು 10 ಕೋಟಿ ಏಕೆ ಘೋಷಿಸುತ್ತಿದ್ದೀರಿ? ನೀವು 10 ರೂಪಾಯಿ ಬಾಚಣಿಗೆ ಕೊಟ್ಟರೆ ನಾನೇ ಮಾಡುತ್ತೇನೆ” ಎಂದಿದ್ದಾರೆ ಎಂದು ವರದಿ ತಿಳಿಸಿದೆ.