ನ್ಯೂಸ್ ನಾಟೌಟ್ : ಕಳೆದ ಹನ್ನೊಂದು ವರ್ಷಗಳ ಹಿಂದೆ ಧರ್ಮಸ್ಥಳದ ಪಾಂಗಾಳ ಎಂಬಲ್ಲಿ ಉಜಿರೆ ಕಾಲೇಜ್ ವಿದ್ಯಾರ್ಥಿನಿ ಸೌಜನ್ಯ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಪ್ರತಿಭಟನೆಯ ಕಾವು ತೀವ್ರಗೊಂಡಿದೆ. ಸೌಜನ್ಯಳಿಗೆ ನ್ಯಾಯ ಸಿಗಬೇಕು,ಹಂತಕರು ಯಾರಿದ್ದಾರೋ ಅವರನ್ನು ಕೂಡಲೇ ಪತ್ತೆ ಹಚ್ಚಿ ಶಿಕ್ಷೆಗೊಳಪಡಿಸಿ ಎಂಬ ಒತ್ತಾಯಗಳು ಕೇಳಿ ಬರುತ್ತಿವೆ.
ಇದೀಗ ಸೌಜನ್ಯಳ ನ್ಯಾಯಕ್ಕಾಗಿ ಜಿಲ್ಲಾ ಒಕ್ಕಲಿಗರ ಹೋರಾಟ ಸಮಿತಿ ಮಂಗಳೂರು ‘ನಮ್ಮೆಲ್ಲರ ಚಿತ್ತ ಮಂಗಳೂರಿನತ್ತ’ ‘ಜಿಲ್ಲಾ ಮಟ್ಟದ ಧರಣಿ-ಸತ್ಯಾಗ್ರಹ’ವನ್ನು ವಿಶೇಷ ರೀತಿಯಲ್ಲಿ ಹಮ್ಮಿಕೊಂಡಿದೆ.
ಸೆಪ್ಟೆಂಬರ್ 12ರಂದು ಮಂಗಳೂರು ತಾಲೂಕು,ಬೆಳ್ತಂಗಡಿ ತಾಲೂಕು ಹಾಗೂ ಬಂಟ್ವಾಳ ತಾಲೂಕಿನ ಒಕ್ಕಲಿಗರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಮತ್ತು ಸೆಪ್ಟೆಂಬರ್ 13 ರಂದು ಸುಳ್ಯ ತಾಲೂಕು, ಪುತ್ತೂರು ತಾಲೂಕು ಹಾಗೂ ಕಡಬ ತಾಲೂಕಿನ ಒಕ್ಕಲಿಗರು ಜಿಲ್ಲಾ ಮಟ್ಟದ ಧರಣಿ – ಸತ್ಯಾಗ್ರಹದಲ್ಲಿ ಭಾಗಿಯಾಗಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಸೆಪ್ಟೆಂಬರ್ 12 ಹಾಗೂ 13ರಂದು ನಡೆಯಲಿರುವ ಜಿಲ್ಲಾ ಮಟ್ಟದ ಧರಣಿ-ಸತ್ಯಾಗ್ರಹವು ಬೆಳಗ್ಗೆ 10ರಿಂದ ಸಂಜೆ 5ರ ತನಕ ಇರಲಿದೆ.ಈ ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಒಗ್ಗಲಿಗರು ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ.
ದುಷ್ಟರ ಕೆಂಗಣ್ಣಿಗೆ ದುರಂತ ಅಂತ್ಯ ಕಂಡ ಬಡ ಹುಡುಗಿ ಸೌಜನ್ಯಾಳ ನ್ಯಾಯಕ್ಕಾಗಿ ಈ ಧರಣಿ -ಸತ್ಯಾಗ್ರಹ ಹಮ್ಮಿಕೊಂಡಿದ್ದು ಎಲ್ಲಾ ಒಕ್ಕಲಿಗ ಸಮಾಜ ಬಾಂಧವರು ಪಾಲ್ಗೊಳ್ಳಬೇಕಾಗಿ ಗೌಡರ ಯುವ ಸಂಘ(ರಿ)ಸುಳ್ಯ ವಿನಂತಿಸಿದೆ.