ನ್ಯೂಸ್ ನಾಟೌಟ್: ಇತ್ತೀಚಿನ ದಿನಗಳಲ್ಲಿ ಮೊಬೈಲ್ ಫೋನ್ ಕದಿಯುವ ಗ್ಯಾಂಗ್ ನ ಹಾವಳಿ ರಾಜ್ಯದ ಜನತೆಗೆ ದೊಡ್ಡ ತಲೆನೋವಾಗಿದೆ. ಅಂತಹ ಗ್ಯಾಂಗ್ ನವರು ಇದ್ದರೂ ಕೆಲವು ಸಲ ಪೊಲೀಸರು ಕೂಡ ಹಿಡಿಯುವ ಮನಸ್ಸು ಮಾಡಲ್ಲ. ಆದರೆ ಇಲ್ಲೊಬ್ಬಳು ಯುವತಿ ತನ್ನ ಮೊಬೈಲ್ ಕದ್ದ ಕಳ್ಳನನ್ನು ಬೆನ್ನಟ್ಟಿ ಹಿಡಿದು ಭಾರಿ ಸುದ್ದಿಯಾಗಿದ್ದಾರೆ. ಜಾಲತಾಣದಲ್ಲಂತೂ ಈಕೆಯ ಸಾಧನೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಕರ್ನಾಟಕ ಬಂದ್ ಹಿನ್ನೆಲೆ ಯುವತಿಯೊಬ್ಬಳು ಊರಿಗೆ ತೆರಳಲು ಬಸ್ಗಾಗಿ ಕಾಯುತ್ತಿದ್ದ ವೇಳೆ ವ್ಯಕ್ತಿಯೊಬ್ಬ ಮೊಬೈಲ್ ಕದ್ದು ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಈ ವೇಳೆ ಯುವತಿ ಓಡುತ್ತಿದ್ದ ಕಳ್ಳನನ್ನ ಸ್ವತಃ ಬೆನ್ನಟ್ಟಿದ್ದಾರೆ. ಈ ಘಟನೆ ಹಾವೇರಿ ನಗರದ ಬಸ್ ನಿಲ್ದಾಣದಲ್ಲಿ ನಿನ್ನೆ (ಗುರುವಾರ) ತಡರಾತ್ರಿ ನಡೆದಿದೆ. ಯುವತಿ ಖದೀಮನನ್ನು ಹಿಡಿದು ಬೆಂಡೆತ್ತಿ ಬೆವರಿಳಿಸುತ್ತಿದ್ದ ವೇಳೆ ಆಕೆಯ ಸಹಾಯಕ್ಕೆ ಅಲ್ಲಿ ನೆರೆದಿದ್ದ ಜನರು ಬಂದಿದ್ದಾರೆ. ತಾನೊಂದು, ನೀನೊಂದು ಎಂಬಂತೆ ಕಳ್ಳನಿಗೆ ಧರ್ಮದೇಟು ಕೊಟ್ಟಿದ್ದಾರೆ.
ಸಾರಿಗೆ ಸಿಬ್ಬಂದಿ ಹಾಗೂ ಸಾರ್ವಜನಿಕರು ಕಳ್ಳನಿಗೆ ಹಿಗ್ಗಾಮುಗ್ಗಾ ಗೂಸಾ ಕೊಟ್ಟಿದ್ದಾರೆ. ಧರ್ಮದೇಟು ಕೊಡುವ ದೃಶ್ಯಗಳು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮೊಬೈಲ್ ಕದ್ದು ಸಿಕ್ಕಿಬಿದ್ದವನು ರಾಜು ಎಂದು ಗುರುತಿಸಲಾಗಿದೆ. ಖದೀಮನನ್ನು ಸಾರ್ವಜನಿಕರು ಪೋಲಿಸರಿಗೆ ಒಪ್ಪಿಸಿದ್ದಾರೆ. ಸದ್ಯ ಕಳ್ಳನನ್ನು ಪೊಲೀಸರು ಠಾಣೆಗೆ ಕರೆದೊಯ್ಯದು ವಿಚಾರಣೆ ನಡೆಸುತ್ತಿದ್ದಾರೆ. ಅತ್ತ ಯುವತಿಯ ಧೈರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.