ನ್ಯೂಸ್ ನಾಟೌಟ್: ಸುಳ್ಯ ನಗರ ಪಂಚಾಯತ್ನಲ್ಲಿ ಶಾಸಕಿ ಜತೆ ನಗರ ಪಂಚಾಯತ್ ಸದಸ್ಯರು ಸಂವಾದ ನಡೆಸಿದರು. ಸುಳ್ಯ ನಗರದ ಅಭಿವೃದ್ಧಿಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ ತರಿಸಲು ಪ್ರಯತ್ನ ನಡೆಸಬೇಕು ಎಂದು ನಗರ ಪಂಚಾಯತ್ ಸದಸ್ಯರು ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಮನವಿ ಮಾಡಿದ್ದಾರೆ.
ನಗರ ಪಂಚಾಯತ್ ಸದಸ್ಯ ವಿನಯಕುಮಾರ್ ಕಂದಡ್ಕ ಮಾತನಾಡಿ, ಮುಖ್ಯಮಂತ್ರಿಗಳ ವಿಶೇಷ ಅನುದಾನ ತರಿಸುವ ಮೂಲಕ ರಸ್ತೆಗಳ ಅಭಿವೃದ್ಧಿಗೆ ಹೆಚ್ಚುವರಿ ಅನುದಾನದ ಬೇಡಿಕೆ ಇರಿಸಬೇಕು. ನಗರದ ಅಭಿವೃದ್ಧಿಗೆ ಸರಕಾರದಿಂದ 5 ಕೋಟಿ ರೂ.ಅನುದಾನ ನೀಡುತ್ತದೆ. ಸುಳ್ಯ ನಗರದಲ್ಲಿ ಸುಮಾರು 140 ಕಿ.ಮೀ.ರಸ್ತೆ ಇದೆ. ಈ ಅನುದಾನ ಸಾಕಾಗುವುದಿಲ್ಲ. ಆದ್ದರಿಂದ ನಗರಾಭಿವೃದ್ಧಿಗೆ ಸರಕಾರ ಅನುದಾನ ಬಿಡುಗಡೆ ಮಾಡುವ ಸಂದರ್ಭ ಹೆಚ್ಚುವರಿ ಅನುದಾನಕ್ಕೆ ಬೇಡಿಕೆ ಇಡಬೇಕು ಎಂದು ಆಗ್ರಹಿಸಿದರು.
ಸದಸ್ಯ ಶರೀಫ್ ಕಂಠಿ ಮಾತನಾಡಿ, ನಗರ ವ್ಯಾಪ್ತಿಯಲ್ಲಿ ವಸತಿ ಅನುದಾನ ಮಂಜೂರಾದ ಫಲಾನುಭವಿಗಳಿಗೆ ಒಂದು ಕಂತು ಮಾತ್ರ ಬಿಡುಗಡೆಯಾಗಿದೆ. ಮನೆ ಮುರಿದು ಅರ್ಧ ಕೆಲಸ ಆಗಿ ಈಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದ್ದರಿಂದ ವಸತಿ ಯೋಜನೆ ಮುಂದಿನ ಕಂತು ಶೀಘ್ರ ಬಿಡುಗಡೆ ಮಾಡಲು ಸರಕಾರಕ್ಕೆ ಆಗ್ರಹಿಸಬೇಕು. ನಗರ ವ್ಯಾಪ್ತಿಯಲ್ಲಿ 54 ಮಂದಿಗೆ ವಸತಿ ಮಂಜೂರಾಗಿದ್ದು, ಅವರಿಗೆ ಒಂದು ಕಂತು ಮಾತ್ರ ಬಂದಿದೆ ಎಂದರು.
ನಗರ ಪಂಚಾಯತ್ನಲ್ಲಿ ಇಂಜಿನಿಯರ್, ಆರೋಗ್ಯ ನಿರೀಕ್ಷಕರು ಹಾಗೂ ಕಂದಾಯ ನಿರೀಕ್ಷಕರು ಸೇರಿ ಪ್ರಮುಖ ಹುದ್ದೆಗಳು ಖಾಲಿಯಿದ್ದು, ನಗರ ಪಂಚಾಯತ್ ಕೆಲಸಗಳು ಆಗುತ್ತಿಲ್ಲ. ಆದುದರಿಂದ ಪೂರ್ಣಾವಧಿಗೆ ಇಂಜಿನಿಯರ್, ಆರೋಗ್ಯ ನಿರೀಕ್ಷಕರು ಹಾಗೂ ಕಂದಾಯ ನಿರೀಕ್ಷಕರ ನೇಮಕಾತಿ ಮಾಡಬೇಕು ಎಂದು ಸದಸ್ಯರಾದ ಡೇವಿಡ್ ಧೀರಾ ಕ್ರಾಸ್ತಾ ಹಾಗೂ ಶರೀಫ್ ಕಂಠಿ ಒತ್ತಾಯಿಸಿದರು.
ಮಹಾಯೋಜನೆಯ ಕಾನೂನನ್ನು ಸರಳೀಕರಣ ಮಾಡಿ ಅನುಷ್ಠಾನ ಮಾಡಬೇಕು ಎಂದು ಸದಸ್ಯ ವಿನಯಕುಮಾರ್ ಕಂದಡ್ಕ ತಿಳಿಸಿದರು. ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಶಾಸಕರು ನಗರ ಪಂಚಾಯತ್ನ ಅಭಿವೃದ್ಧಿ ಬೇಡಿಕೆಗಳನ್ನು ಸರಕಾರದ ಗಮನಕ್ಕೆ ತಂದು ಪರಿಹಾರಕ್ಕೆ ಪ್ರಯತ್ನ ನಡೆಸುವುದಾಗಿ ತಿಳಿಸಿದರು.
ನಗರ ಪಂಚಾಯಿತಿ ಸದಸ್ಯರಾದ ಬಾಲಕೃಷ್ಣ ಭಟ್ ಕೊಡಂಕಿರಿ, ಡೇವಿಡ್ ಧೀರಾ ಕ್ರಾಸ್ತಾ ಶಶಿಕಲಾ ನೀರಬಿದಿರೆ, ಶೀಲಾ ಅರುಣಾ ಕುರುಂಜಿ, ಕಿಶೋರಿ ಶೇಟ್, ಶಿಲ್ಪಾ ಸುದೇವ್, ಬುದ್ಧ ನಾಯ್ಕ, ನಾರಾಯಣ ಕೆ., ಶರೀಫ್ ಕಂಠಿ, ರಿಯಾಝ್ ಕಟ್ಟೆಕ್ಕಾರ್, ಪೂಜಿತಾ ಕೇರ್ಪಳ, ಸುಧಾಕರ್, ಪ್ರವಿತಾ ಪ್ರಶಾಂತ್ ಇದ್ದರು. ಮುಖ್ಯಾಧಿಕಾರಿ ಸುಧಾಕರ ಎಂ.ಎಚ್. ಸ್ವಾಗತಿಸಿ, ವಂದಿಸಿದರು.