ನ್ಯೂಸ್ ನಾಟೌಟ್: ನೆಹರೂ ಮೆಮೊರಿಯಲ್ ಕಾಲೇಜಿನ ನೇಚರ್ ಕ್ಲಬ್ ಮತ್ತು ಆಂತರಿಕ ಗುಣಮಟ್ಟ ಖಾತರಿ ಕೋಶ ಘಟಕಗಳ ವತಿಯಿಂದ ‘ಪ್ರಕೃತಿ ಸಂರಕ್ಷಣೆ ನಮ್ಮಿಂದಲೇ ಆರಂಭವಾಗಲಿ’ ವಿಚಾರವಾಗಿ ಮಾಹಿತಿ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಸೆಪ್ಟೆಂಬರ್ 29 ಶುಕ್ರವಾರದಂದು ಕಾಲೇಜಿನ ದೃಶ್ಯ ಶ್ರವಣ ಕೊಠಡಿಯಲ್ಲಿ ನಡೆಯಿತು.
ಪಶ್ಚಿಮ ಘಟ್ಟಗಳ ವನ್ಯಜೀವಿ ಅಧ್ಯಯನ ಮತ್ತು ಸಂರಕ್ಷಣೆ ಯೋಜನೆಗಳಲ್ಲಿ ಸತತ ಭಾಗವಹಿಸುತ್ತಿರುವ ಭುವನೇಶ್ವರ ಕೈಕಂಬ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದರು.ಬಳಿಕ ಮಾತನಾಡಿದ ಅವರು ಕಾಡಿನ ಪ್ರತಿ ಜೀವಸಂಕುಲದ ಅನನ್ಯ ಕೊಡುಗೆಗಳ ಬಗ್ಗೆ, ಕಾಡಿನ ಸಂರಕ್ಷಣೆಗೆ ವನ್ಯಜೀವಿಗಳ ಅಗತ್ಯತೆ ಹಾಗೂ ಅವುಗಳ ಉಳಿವಿಗೆ ನಾವು ಕೈಗೊಳ್ಳಬೇಕಾದ ಕಾರ್ಯಯೋಜನೆಗಳ ಬಗ್ಗೆ ವಿವರಿಸಿದರು. ವನ್ಯ ಜೀವಿ ಇಲಾಖೆಯ ವಿಜ್ಞಾನಿಗಳ ಜೊತೆಗೂಡಿ ವಿದ್ಯಾರ್ಥಿಗಳಿಗೆ ಅಧ್ಯಯನ, ಸಂಶೋಧನೆ ಸಂಬಂಧಿತ ಅವಕಾಶಗಳ ಬಗ್ಗೆ ತಿಳಿಸಿದರು.
ಜೀವವಿಜ್ಞಾನ ವಿದ್ಯಾರ್ಥಿಗಳು ಹೆಚ್ಚು ಪ್ರಕೃತಿ ಸಂರಕ್ಷಣೆ ಸಂಬಂಧಿತ ವಿಷಯಗಳಲ್ಲಿ ಆಸಕ್ತಿ ಹೆಚ್ಚಿಸಿಕೊಂಡು ಸಂಬಂಧಿಸಿದ ಉದ್ಯೋಗಾವಕಾಶಗಳನ್ನು ಪಡೆದುಕೊಳ್ಳುವಂತೆ ಪ್ರೇರೇಪಿಸಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಐಕ್ಯೂಎಸಿ ಘಟಕದ ಸಂಯೋಜಕಿ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಮಮತಾ.ಕೆ ಮಾತನಾಡಿ ಸಂಪನ್ಮೂಲ ವ್ಯಕ್ತಿಗಳ ವೃತ್ತಿ ಜೀವನದ ಸಾಧನೆಗಳನ್ನು ಶ್ಲಾಘಿಸಿ, ವಿದ್ಯಾರ್ಥಿಗಳು ಕೂಡ ವನ್ಯ ಜೀವಿ ಅಧ್ಯಯನ ಕ್ಷೇತ್ರದಲ್ಲಿ ಸಿಗುವ ಅವಕಾಶಗಳ ಸದುಪಯೋಗ ಪಡೆದುಕೊಳ್ಳುವಂತೆ ಅಭಿಪ್ರಾಯ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಕಾಲೇಜಿನ ಶೈಕ್ಷಣಿಕ ಸಲಹೆಗಾರರಾದ ಪ್ರೊ.ಬಾಲಚಂದ್ರ ಗೌಡ ಎಂ, ಪ್ರಾಂಶುಪಾಲರಾದ ಪ್ರೊ.ರುದ್ರಕುಮಾರ್ ಎಂ. ಎಂ. ಉಪಸ್ಥಿತರಿದ್ದರು. ನೇಚರ್ ಕ್ಲಬ್ ಕಾರ್ಯದರ್ಶಿ ಕು.ಪವಿತ್ರಾಕ್ಷಿ ಸ್ವಾಗತಿಸಿ, ನೇಚರ್ ಕ್ಲಬ್ ಸಂಯೋಜಕ ಕುಲದೀಪ್ ಪೆಲ್ತಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು.ಶಿಲ್ಪಾ ಮತ್ತು ಕು.ಚೈತ್ರ ಪ್ರಾರ್ಥಿಸಿ, ಕು. ಲಿಖಿತಾ ಅತಿಥಿಗಳನ್ನು ಪರಿಚಯಿಸಿ, ನೇಚರ್ ಕ್ಲಬ್ ಕೋಶಾಧಿಕಾರಿ ಕು.ಮಧಿವರ್ಧಿನಿ ವಂದಿಸಿದರು. ಕು.ಮಹಿಮಾ ಕಾರ್ಯಕ್ರಮ ನಿರೂಪಿಸಿದರು. ಕಾಲೇಜಿನ ಉಪನ್ಯಾಸಕರು, ನೇಚರ್ ಕ್ಲಬ್ ಸದಸ್ಯರು ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಸಹಕರಿಸಿದರು.