ನ್ಯೂಸ್ ನಾಟೌಟ್ : ಹಲವು ವರ್ಷಗಳಿಂದ ಕಸದ ಸಮಸ್ಯೆಯನ್ನು ಎದುರಿಸುತ್ತಿದ್ದ ಸುಳ್ಯ ನಗರ ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.ಸುಳ್ಯದಲ್ಲಿ ಕಸ ವಿಲೇವಾರಿ ಸಮಸ್ಯೆಯು ನಗರಾಡಳಿತಕ್ಕೆ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದಂತಿತ್ತು.ಇದೀಗ ಸುಳ್ಯ ನಗರ ಸ್ವಚ್ಛ ನಗರವಾಗಿ ಬದಲಾವಣೆಯಾಗುತ್ತಿದೆ ಅನ್ನುವಷ್ಟರಲ್ಲೇ ಮತ್ತೆ ಯಾರೋ ಕಿಡಿಗೇಡಿಗಳು ರಾತ್ರೋ ರಾತ್ರಿ ಬಂದು ರಸ್ತೆಗೆ ಕಸ ಎಸೆದು ಪರಾರಿಯಾಗಿದ್ದಾರೆ.
ಸುಳ್ಯದ ಹೃದಯಭಾಗದಲ್ಲಿರುವ ರಥಬೀದಿ ರಸ್ತೆಯ ರಿಕ್ಷಾ ನಿಲ್ದಾಣದ ಬಳಿ ಈ ದೃಶ್ಯ ಕಂಡು ಬಂದಿದ್ದು,ಸಾರ್ವಜನಿಕರು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ತ್ಯಾಜ್ಯವು ಎಲ್ಲೆಂದರಲ್ಲಿ ಹರಡಿಕೊಂಡಿದ್ದು, ಪ್ರಯಾಣಿಕರಿಗೆ,ವಾಹನ ಸವಾರರಿಗೆ ,ಪಾದಚಾರಿಗಳಿಗೆ ಭಾರಿ ತೊಂದರೆಯಾಗಿದೆ. ಈ ಸಂಬಂಧ ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳುವಂತೆಯೂ ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ತಪ್ಪಿತಸ್ಥರ ಬೇಜವಾಬ್ದಾರಿ ಹಾಗೂ ಸಮಾಜಘಾತುಕ ಕೃತ್ಯಕ್ಕೆ ನಾಗರಿಕರು ಕೆಂಡಾಮಂಡಲರಾಗಿದ್ದು, ಕೂಡಲೇ ಅವರ ವಿರುದ್ಧ ಕ್ರಮಕೈಗೊಳ್ಳವಂತೆ ಎಚ್ಚರಿಕೆ ನೀಡಿದ್ದಾರೆ. ವಿಡಿಯೋ ಮಾಡುತ್ತಲೇ ಕಸದ ಮೂಟೆಯನ್ನು ಬಿಚ್ಚಿದ ಸಾರ್ವಜನಿಕರಿಗೆ ಬಿಲ್ ಒಂದು ಸಿಕ್ಕಿದ್ದು,ಅದರಲ್ಲಿರುವ ಹೆಸರನ್ನು ಅವರು ಪತ್ತೆ ಮಾಡಿದ್ದಾರೆ.ಸದ್ಯ ಈ ವಿಡಿಯೋ ಎಲ್ಲೆಡೆ ವೈರಲಾಗುತ್ತಿದೆ.
ಸುಳ್ಯದಲ್ಲಿ ಕಸ ವಿಲೇವಾರಿ ಸಮರ್ಪಕವಾಗಿ ನಡೆಯುತ್ತಿದೆ.ಕಸದ ಗಾಡಿಯೂ ಪ್ರತಿ ಮನೆಗೂ ಮನೆಗೂ ಭೇಟಿಯಾಗಿ ಕಸ ಸಂಗ್ರಹಿಸುತ್ತಿದೆ.ಹೀಗಿದ್ದರೂ ಕೂಡ ಕೆಲವರು ಅದನ್ನು ಬಳಕೆ ಮಾಡಿಕೊಳ್ಳುತ್ತಿಲ್ಲ.ಮನಸೋ ಇಚ್ಛೆ ಎಲ್ಲೆಂದರಲ್ಲಿ ತ್ಯಾಜ್ಯವನ್ನು ಎಸೆದು ತಪ್ಪಿಸಿಕೊಳ್ಳುತ್ತಿದ್ದಾರೆ.ಇವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಾಗೂ ಇನ್ನು ಮುಂದೆ ಈ ಘಟನೆಗಳು ಮರುಕಳಿಸದಂತೆ ನಾವು ನಗರಪಂಚಾಯತ್ ಗೆ ಮನವಿ ಮಾಡುತ್ತಿದ್ದೇವೆ ಹಾಗೂ ಅವರಿಗೆ ಸೂಕ್ತವಾದ ದಂಡ ವಿಧಿಸಿ ಎಂದು ಆಗ್ರಹಿಸುತ್ತಿದ್ದೇವೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.