ನ್ಯೂಸ್ ನಾಟೌಟ್: ದರೋಡೆಗಳು ಸಿನಿಮೀಯ ಶೈಲಿಯಲ್ಲಿ ನಡೆಯೋದನ್ನು ಬೆಂಗಳೂರಿನಂತಹ ಮಹಾನಗರದಲ್ಲಿ ನೋಡಿದ್ದೇವೆ. ಇದೀಗ ಅಂತಹ ಘಟನೆ ಸುಳ್ಯದಂತಹ ಸಣ್ಣ ನಗರದಲ್ಲೂ ನಡೆದಿದ್ದು ಜನ ಬೆಚ್ಚಿಬಿದ್ದಿದ್ದಾರೆ.
ತಡರಾತ್ರಿ ಮನೆಗೆ ಹೋಗುವುದಕ್ಕಾಗಿ ರಿಕ್ಷಾ ಏರಿದ ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿ ಆಟೋದಿಂದ ಹೊರದಬ್ಬಿ ಲಕ್ಷಾಂತರ ರೂ. ನಗದು ದೋಚಿ ಕತ್ತಲಲ್ಲಿ ಪರಾರಿಯಾಗಿದ್ದಾರೆ. ಈ ಸುದ್ದಿ ಒಂದು ರೀತಿಯಲ್ಲಿ ಆತಂಕಕ್ಕೆ ಕಾರಣವಾಗಿದ್ದು ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕಾಗಿದೆ.
ಕೊಡಗು ಜಿಲ್ಲೆ ಮಡಿಕೇರಿ ತಾಲೂಕು ಕಾರುಗುಂದ ಗ್ರಾಮದ ದರ್ಶನ್ (27ವರ್ಷ) ವೈಯಕ್ತಿಕ ಕೆಲಸದ ಕಾರಣದಿಂದ ಸೆ.18ರಂದು ಸುಳ್ಯಕ್ಕೆ ಬಂದಿದ್ದರು. ಈ ವೇಳೆ ವಾಪಸ್ ಮಡಿಕೇರಿಗೆ ಹೊರಡುವಾಗ ತಡರಾತ್ರಿ ಆಗಿದ್ದರಿಂದ ಸುಳ್ಯದ ಹಳೆಗೇಟ್ ಸಮೀಪದಿಂದ ಸುಳ್ಯದ ಬಸ್ ನಿಲ್ದಾಣಕ್ಕೆ ಬರುವುದಕ್ಕೆ ದರ್ಶನ್ ಆಟೋವೊಂದನ್ನು ಹತ್ತಿದ್ದಾರೆ. ಈ ವೇಳೆ ಆಟೋದ ಹಿಂಬದಿಯಲ್ಲಿ ಇಬ್ಬರು ಕುಳಿತಿದ್ದು ಆಟೋ ಚಾಲಕ ಸಹಿತ ಮೂವರಿದ್ದರು.
ಅವರು ದರ್ಶನ ಅವರ ಕೈನಲ್ಲಿ ಬ್ಯಾಗ್ ಅನ್ನು ಬಲವಂತದಿಂದ ಕಿತ್ತುಕೊಂಡಿದ್ದಾರೆ. ಜೊತೆಗೆ ಹಲ್ಲೆ ನಡೆಸಿದ್ದಾರೆ. ಆಟೋದಿಂದ ಹೊರಕ್ಕೆ ದೂಡಿ ಹಾಕಿ ಕತ್ತಲಿನಲ್ಲಿ ಪರಾರಿಯಾಗಿದ್ದಾರೆ. ಬ್ಯಾಗ್ ನೊಳಗೆ ಸುಮಾರು 3.5 ಲಕ್ಷ ರೂ. ನಗದು ಇತ್ತು, ಅಲ್ಲದೆ ಎರಡು ಮೊಬೈಲ್, ದಾಖಲಾತಿ ಪತ್ರಗಳು ಕೂಡ ಇದ್ದವು ಎಂದು ತಿಳಿದು ಬಂದಿವೆ.
ಕತ್ತಲಾಗಿದ್ದ ಕಾರಣಕ್ಕೆ ಗಾಬರಿಯಲ್ಲಿದ್ದ ದರ್ಶನ್ ಗೆ ಸರಿಯಾಗಿ ಆಟೋದ ನಂಬರ್ ದಾಖಲಿಸುವುದಕ್ಕೆ ಸಾಧ್ಯವಾಗಿರುವುದಿಲ್ಲ. ಸದ್ಯ ಸುಳ್ಯ ಪೊಲೀಸ್ ಠಾಣೆಯಲ್ಲಿ ಅ.ಕ್ರ:105/2023 ಕಲಂ: 392 ಐಪಿಸಿರಂತೆ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.