ನ್ಯೂಸ್ ನಾಟೌಟ್: ಕ್ರೀಡೆಯಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯ ವೃದ್ಧಿಯಾಗುತ್ತದೆ. ವಿದ್ಯಾರ್ಥಿಗಳು ಎಲ್ಲಾ ಕ್ರೀಡೆಗಳಲ್ಲೂ ಹೆಚ್ಚು ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸಬೇಕು ಎಂದು ಅಂತಾರಾಷ್ಟ್ರೀಯ ಕಬಡ್ಡಿಪಟು, ಏಷ್ಯನ್ ಗೇಮ್ಸ್ ಚಿನ್ನದ ಪದಕ ವಿಜೇತ, ತೆಲುಗು ಟೈಟಾನ್ಸ್ ತಂಡದ ಕೋಚ್ ಜಗದೀಶ್ ಕುಂಬ್ಳೆ ಹೇಳಿದರು.
ಅವರು ಸುಳ್ಯದ ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ವತಿಯಿಂದ ಕಾಲೇಜಿನ ಕ್ರೀಡಾಂಗಣದಲ್ಲಿ ಆಯೋಜಿಸಿದ ಮೈಸೂರು ವಲಯದ ಅಂತರ್ಕಾಲೇಜು ವಾಲಿಬಾಲ್ ಟೂರ್ನಮೆಂಟ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸುಳ್ಯ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಅಧ್ಯಕ್ಷ ಡಾ.ಕೆ.ವಿ. ಚಿದಾನಂದ ಮಾತನಾಡಿ, ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಆದರೆ ಧೈರ್ಯದಿಂದ ಭಾಗವಹಿಸಿ ತಮ್ಮ ಕ್ರೀಡಾಸಕ್ತಿ ಪ್ರದರ್ಶಿಸುವುದು ಮುಖ್ಯ ಎಂದರು.
ಕಾರ್ಯಕ್ರಮದಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ನ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ., ಎಒಎಲ್ಇನ ಕಾರ್ಯದರ್ಶಿ ಹೇಮನಾಥ ಕುರುಂಜಿ, ಮಂಡ್ಯದ ಎಂಐಎಂಎಸ್ನ ದೈಹಿಕ ನಿರ್ದೇಶಕ ಡಾ. ಸುರೇಶ್ ಎಸ್.ಎಂ., ಕೆ.ವಿ.ಜಿ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯ ಡೀನ್ ನೀಲಾಂಬಿಕೈ ನಟರಾಜನ್, ಕೆ.ವಿ.ಜಿ. ಆರ್ಯುವೇದ ಕಾಲೇಜಿನ ಪ್ರಾಂಶುಪಾಲ ಡಾ. ಲೀಲಾಧರ್ ಡಿ.ವಿ., ಕ್ರೀಡಾ ಸಂಯೋಜಕ ಡಾ. ರವಿಕಾಂತ್ ಮತ್ತಿತರರು ಉಪಸ್ಥಿತರಿದ್ದರು. ಟೂರ್ನಮೆಂಟ್ನಲ್ಲಿ 50ಕ್ಕೂ ಅಧಿಕ ತಂಡಗಳು ಭಾಗವಹಿಸಿದ್ದವು.