ನ್ಯೂಸ್ ನಾಟೌಟ್ : ಇಬ್ಬರು ಪಶು ವೈದ್ಯರು ಸೇರಿ ಒಂದು ತಿಂಗಳ ಕರುವೊಂದಕ್ಕೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಿದ ಘಟನೆ ಸುಳ್ಯದಿಂದ ವರದಿಯಾಗಿದೆ.ಮಾತು ಬಾರದ ಮೂಕ ಕರು ತನ್ನ ನೋವನ್ನು ಹೇಳಿ ಕೊಳ್ಳಲಾಗದೇ ಒದ್ದಾಡುತ್ತಿತ್ತು.ಹೀಗೆ ಗಾಯಗೊಂಡಿದ್ದ ಕರುವನ್ನು ಸುಳ್ಯದ ಪಶುವೈದ್ಯಾಧಿಕಾರಿಗೆ ಬಂದು ತೋರಿಸಿದಾಗ ಅದಕ್ಕೆ ಶಸ್ತ್ರಚಿಕಿತ್ಸೆಯ ಅಗತ್ಯವಿದೆ ಎಂದು ಮನಗಂಡು ವೈದ್ಯರು ಆಪರೇಶನ್ಗೆ ಮುಂದಾದರು..!
ಸುಳ್ಯ ತಾಲೂಕಿನ ಐವರ್ನಾಡು ಗ್ರಾಮದ ಕೃಷ್ಣಪ್ಪ ಕುಕ್ಕುಡೇಲು ಎಂಬುವರ ಮನೆಯಲ್ಲಿ ಒಂದು ತಿಂಗಳ ಪುಟಾಣಿ ಕರು ಗಾಯದಿಂದ ಯಾತನೆ ಅನುಭವಿಸುತ್ತಿತ್ತು.ಗುಂಡಿಗೆ ಬಿದ್ದು ಅದರ ದವಡೆ ಮೂಳೆ ಮುರಿದಿತ್ತು.ಹೀಗಾಗಿ ಮನೆಯವರು ಆ ಕರುವನ್ನು ಕರೆತಂದು ಸುಳ್ಯದ ಪಶುವೈದ್ಯಾಧಿಕಾರಿಯಾದ ಡಾ. ನಿತಿನ್ ಪ್ರಭು ಅವರಿಗೆ ತೋರಿಸಿದರು.ಇದನ್ನು ಪರೀಕ್ಷಿಸಿದ ಅವರು ಶಸ್ತ್ರ ಚಿಕಿತ್ಸೆ ಅವಶ್ಯಕ ಎಂದಿದ್ದಾರೆ.ಕೂಡಲೇ ಡಾ.ನಿತಿನ್ ಪ್ರಭು ಹಾಗೂ ಡಾ. ನಾಗರಾಜ್ ಮನುಷ್ಯರಿಗೆ ಆಪರೇಶನ್ ಮಾಡುವ ರೀತಿಯಲ್ಲಿಯೇ ಆಪರೇಷನ್ ಮಾಡಿ ಬೋನ್ ಪಿನ್ನಿಂಗ್ ಅಳವಡಿಸಿದ್ದಾರೆ.ಪುಟ್ಟ ಕರುವಿಗೆ ಹೊಸ ಬದುಕನ್ನೇ ನೀಡಿ ಅದರ ಬಾಳಲ್ಲಿ ಬೆಳಕಾಗಿದ್ದಾರೆ.
ನಿಜವಾಗಲೂ ಇದೊಂದು ರೋಚಕ ಕ್ಷಣ ಹಾಗೂ ಅಪರೂಪದ ಶಸ್ತ್ರಚಿಕಿತ್ಸೆ ಆಗಿದ್ದು ಸುಳ್ಯ ಪಶುಪಾಲನಾ ಇಲಾಖೆಯಲ್ಲಿ ಮೊದಲ ಬಾರಿಗೆ ಯಶಸ್ವಿಯಾಗಿದ್ದು ಹೆಮ್ಮೆಯ ವಿಷಯ. ಸಾಮಾಜಿಕ ಜಾಲತಾಣದಲ್ಲಿಯೂ ಈ ಕುರಿತ ಪೋಸ್ಟ್ಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿದ್ದು,ಇಬ್ಬರು ಪಶು ವೈದ್ಯರುಗಳ ಈ ಕಾರ್ಯಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.
ಡಾಕ್ಟರ್ ನಾಗರಾಜ್ ಅವರು ಕೇರಳ ಪಶು ವೈದ್ಯಕೀಯ ಪರಿಷತ್ತಿನ ನಿವೃತ್ತ ನಿಬಂಧಕರು.ಅವರು ಪ್ರಸ್ತುತ ತುರ್ತು ಪಶು ಚಿಕಿತ್ಸಾ ವ್ಯವಸ್ಥೆಯ ಪಶು ವೈದ್ಯರಾಗಿ ನಿವೃತ್ತಿ ನಂತರ ಸುಳ್ಯದಲ್ಲಿ ಕೆಲಸ ಮಾಡುತ್ತಿದ್ದಾರೆ.ಅಂತು ಮಾತು ಬಾರದ ಮೂಕ ಕರುವಿಗೆ ಅಪರೂಪದ ಚಿಕಿತ್ಸೆ ನಡೆಸಿ ಅದರ ನೋವಿಗೆ ಸ್ಪಂದಿಸಿದ ಇಬ್ಬರು ವೈದ್ಯರ ಮಾನವೀಯ ಗುಣಕ್ಕೆ ಪ್ರಾಣಿ ಪ್ರೇಮಿಗಳು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.ನಿಮ್ಮ ಈ ಕಾರ್ಯ ಹೀಗೆಯೇ ಮುಂದುವರಿಯಲಿ ಎಂದಿದ್ದಾರೆ.