ನ್ಯೂಸ್ ನಾಟೌಟ್: ಸೌಜನ್ಯ ಪ್ರಕರಣದ ಸುತ್ತಲಿನ ಅನುಮಾನಗಳು ದಿನದಿಂದ ದಿನಕ್ಕೆ ಬಲವಾಗುತ್ತಿದೆ. ಇದೀಗ ಒಕ್ಕಲಿಗ ಸಮುದಾಯ ಬೀದಿಗಿಳಿದು ಹೋರಾಟ ಮಾಡುತ್ತಿದೆ. ಇದಕ್ಕೆ ಶ್ರೀ ಆದಿಚುಂಚನಗಿರಿ ಮಠ ಕೂಡ ಬೆಂಬಲ ನೀಡಿದೆ.
ಸೌಜನ್ಯಳಿಗೆ ನ್ಯಾಯ ಕೊಡಿಸಲೇಬೇಕು ಅನ್ನುವ ತೀರ್ಮಾನಕ್ಕೆ ಶ್ರೀ ಆದಿಚುಂಚನಗಿರಿ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಕೂಡ ಬಂದಿದ್ದಾರೆ. ಇದರೊಂದಿಗೆ ಹೋರಾಟಕ್ಕೆ ಸ್ಪಷ್ಟ ದಿಕ್ಕು ಸಿಕ್ಕಿದಂತಾಗಿದ್ದು ವಾರದೊಳಗೆ ಶ್ರೀಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಈ ವಿಚಾರದಲ್ಲಿ ಮಾತನಾಡುವ ಸಾಧ್ಯತೆ ಇದೆ.
ಭಾನುವಾರ ಸೌಜನ್ಯ ಪ್ರಕರಣ ಒಕ್ಕಲಿಗರ ದಕ್ಷಿಣ ಕನ್ನಡ ಜಿಲ್ಲಾ ಹೋರಾಟ ಸಮಿತಿಯ ಒಟ್ಟು 150 ಕ್ಕೂ ಹೆಚ್ಚು ಮಂದಿ ಪ್ರಮುಖರು ಮಂಡ್ಯ ಜಿಲ್ಲೆಯ ಶ್ರೀ ಆದಿಚುಂಚನಗಿರಿಯ ಪೀಠಾಧ್ಯಕ್ಷ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರನ್ನು ಭೇಟಿಯಾದರು.
ಮಂಗಳೂರು ಶ್ರೀ ಆದಿಚುಂಚನಗಿರಿಯ ಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಮುಖೇನ ಸೌಜನ್ಯ ಹೋರಾಟ ಸಮಿತಿ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಡಿ ಬಿ ಬಾಲಕೃಷ್ಣ ಮತ್ತಿತರ ಮುಖಂಡರ ನೇತೃತ್ವದಲ್ಲಿ ಸ್ವಾಮೀಜಿಗಳ ಭೇಟಿ ಕಾರ್ಯಕ್ರಮ ನಡೆಯಿತು. ಈ ವೇಳೆ ಸ್ವಾಮೀಜಿಗಳಿಗೆ ಸೌಜನ್ಯ ಪರ ವಕೀಲರಾಗಿರುವ ಮೋಹಿತ್ ಸೌಜನ್ಯ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯ ಹೊರಡಿಸಿರುವ ಆದೇಶ ಪ್ರತಿಯನ್ನು ವಿವರಿಸಿದರು.
ಇದನ್ನು ಸ್ವಾಮೀಜಿಗಳು ತಾಳ್ಮೆಯಿಂದ ಆಲಿಸಿದರು. ಬಳಿಕ ಮಾತನಾಡಿದ ಡಾ. ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ, ” ಸೌಜನ್ಯ ಪ್ರಕರಣದಲ್ಲಿ ಇವಳು ನಮ್ಮ ಸಮಾಜದ ಹುಡುಗಿ ಅನ್ನುವ ವಿಚಾರ ಮುಖ್ಯ ಅಲ್ಲ. ಯಾವುದೇ ಸಮುದಾಯದ ಹೆಣ್ಣು ಮಗುವಿಗೂ ಇಂತಹ ಕಷ್ಟ ಬರಬಾರದು. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ‘ಗೋಲ್ಡನ್ ಟೈಮ್’ನಲ್ಲಿ ತನಿಖೆ ಸರಿಯಾಗಿ ನಡೆದಿಲ್ಲ ಅನ್ನುವುದನ್ನು ವಕೀಲರು ನನಗೆ ವಿವರಿಸಿದ್ದಾರೆ.
ಈ ತನಿಖೆಯನ್ನು ಎಸ್ ಐಟಿ ಗೆ ನೀಡಬೇಕು ಅನ್ನುವುದರ ಬಗ್ಗೆ ಸಿಎಂ ಜೊತೆ ಚರ್ಚಿಸುತ್ತೇನೆ. ಅದಕ್ಕೂ ಮೊದಲು ಈ ಪ್ರತಿಯನ್ನು ಒಂದು ವಾರಗಳ ತನಕ ನಾನು ಕೂಡ ಅಧ್ಯಯನ ನಡೆಸುತ್ತೇನೆ. ಒಂದು ವಾರದೊಳಗೆ ಎಲ್ಲ ಓದಿ ಪರಿಶೀಲಿಸಿ ಸರ್ಕಾರದ ಗಮನ ತರುವ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಸ್ವಾಮೀಜಿಗಳ ಭೇಟಿ ವೇಳೆ ಆದಿಚುಂಚನಗಿರಿಯ ಪ್ರಸನ್ನಾನಂದ ಸ್ವಾಮೀಜಿ ಹಾಗೂ ಸುಳ್ಯ, ಬೆಳ್ತಂಗಡಿ, ವಿಟ್ಲ, ಮಂಗಳೂರು, ಪುತ್ತೂರು ,ಕಡಬದ ಎಲ್ಲ ತಾಲೂಕಿನ ಅಧ್ಯಕ್ಷರು, ಪದಾಧಿಕಾರಿಗಳು, ಸಹ ಸಂಚಾಲಕರು ಉಪಸ್ಥಿತರಿದ್ದರು.