ನ್ಯೂಸ್ ನಾಟೌಟ್: ಕಳೆದೆರಡು ವಾರಗಳಿಂದ ಸೌಜನ್ಯಳ ನ್ಯಾಯದ ಹೋರಾಟದ ದಿಕ್ಕೇ ತಪ್ಪುತ್ತಿದೆ ಅನ್ನಿಸುತ್ತಿದೆ. ಉದ್ದೇಶಪೂರ್ವಕವಾಗಿ ಯಾರಾದರೂ ಇದನ್ನು ತಪ್ಪಿಸುತ್ತಿದ್ದಾರಾ ಅಥವಾ ಅದಾಗಿಯೇ ತಪ್ಪುತ್ತಿದೆಯೇ ಅನ್ನೋದು ಜಿಜ್ಞಾಸೆಗೆ ಕಾರಣವಾಗಿದೆ. ನಮಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅನ್ನಿಸಿದ ಅನುಮಾನಗಳನ್ನು ನೇರವಾಗಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಿಮಗೂ ಇದು ಸರಿ ಅನ್ನಿಸಿದ್ದರೆ ಪೂರ್ತಿಯಾಗಿ ಓದಿದ ಬಳಿಕ ಕಾಮೆಂಟ್ ಮೂಲಕ ತಪ್ಪದೆ ನಿಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು.
ಭಾರತೀಯ ಸಂಸ್ಕೃತಿ ಅಖಂಡ ಭಾರತವನ್ನು ಹೆಣ್ಣಿಗೆ ಹೋಲಿಸಿ ಸರ್ವಶ್ರೇಷ್ಠ ಸ್ಥಾನಮಾನ ನೀಡಿದೆ. ನಮ್ಮ ಹೆತ್ತ ತಾಯಿ ಕೂಡ ಒಬ್ಬಳು ಹೆಣ್ಣು. ಹೆಣ್ಣೆಂದರೆ ಕ್ಷಮೆಯಾಧರಿತ್ರಿ ಅಂತೆಲ್ಲ ಹೇಳ್ತಿವಿ. ವೇದಿಕೆಗಳ ಮೇಲೆ ಹೆಣ್ಣಿನ ಗುಣದ ಬಗ್ಗೆಗಂಟೆಗಟ್ಟಲೆ ಭಾಷಣ ಬಿಗಿತ್ತೇವೆ. ಇಷ್ಟೆಲ್ಲ ಮಾಡುವ ನಾವುಗಳು ಒಂದು ಮುಗ್ಧ ಹೆಣ್ಣಿನ ಸಾವಿಗೆ ನ್ಯಾಯ ಒದಗಿಸೋಕೆ ಹೊರಡುವಾಗ ರಾಜಕೀಯ ಕೆಸರೆರಚಾಟ ಮಾಡುತ್ತೀವಿ. ಈ ಸಮಾಜದಲ್ಲಿ ಸೌಜನ್ಯ ಪ್ರಕರಣದ ಇತ್ತೀಚಿನ ಬೆಳವಣಿಗೆಯಲ್ಲಿ ಕಂಡು ಬಂದ ಸೂಕ್ಷ್ಮವಿಚಾರವಿದು.
ನೀವೇ ನೋಡಿ…ಆರಂಭದಲ್ಲಿ ಸೌಜನ್ಯ ಪರ ಸಾಮಾಜಿಕ ಜಾಲತಾಣದಲ್ಲಿ ಬೊಬ್ಬೆ ಹೊಡೆಯುತ್ತಿದ್ದ ಒಂದಷ್ಟು ಮಂದಿ ತಣ್ಣಗಾದರು. ನ್ಯಾಯ ಸಿಗಲಿ ಎಂದು ದಿನಕ್ಕೆರಡು ವಿಡಿಯೋ ಅಪ್ಲೋಡ್ ಮಾಡುತ್ತಿದ್ದವರು ಈಗ ಎಲ್ಲಿದ್ದಾರೆ..? ಇನ್ನೂ ಕೆಲವರಲ್ಲಿ ನ್ಯಾಯ ಕೇಳುವ ಜೋಶ್ ಮೊದಲಿನಂತೆ ಉಳಿದೇ ಇಲ್ಲ. ಹಾಗಾದರೆ ಸೌಜನ್ಯ ಪರ ಮೊದಲು ಧ್ವನಿ ಎತ್ತಿದ್ದು ಏಕೆ..? ಈಗ ಮೌನವಾಗಿದ್ದೇಕೆ..? ನಮ್ಮ ಪ್ರಕಾರ ಯಾರೇ ಆಗಲಿ ಯಾವುದೇ ಒಂದು ವಿಚಾರದಲ್ಲಿ ಗೊಂದಲವಿದ್ದರೆ ಅದರ ಬಗ್ಗೆ ಮಾತನಾಡಲು ಹೋಗಲೇಬಾರದು. ಒಮ್ಮೆ ಮಾತನಾಡಿದ್ವಿ ಅಂದಮೇಲೆ ಜೀವ ಹೋದ್ರೂ ಮಾತಿಗೆ ಬದ್ಧವಾಗಿರಬೇಕು. ಸೌಜನ್ಯಳ ವಿಚಾರದಲ್ಲಿ ಅಂತಹವರ ಸಂಖ್ಯೆ ಕಾಣಿಸಿದ್ದು ವಿರಳ. ಆರಂಭದಲ್ಲಿ ಅಬ್ಬರಿಸಿ ಈಗ ತಣ್ಣಗಾದವರ ಸಂಖ್ಯೆಯೇ ಜಾಸ್ತಿ..!
ಸೌಜನ್ಯ ಪರವಿರುವ ನಕಲಿ ಹೋರಾಟಗಾರರೇ ನೀವು ಸೈಲಂಟ್ ಆಗಿ ಜಾರಿಕೊಳ್ಳಬೇಡಿ. ಸಮಾಜ ನಿಮ್ಮನ್ನು ಬಹಳಷ್ಟು ಸೂಕ್ಷ್ಮವಾಗಿ ಗಮನಿಸುತ್ತಿದೆ. ನೀವು ಯಾವ ರೀತಿಯ ಹೋರಾಟ ಮಾಡುತ್ತಿದ್ದೀರಿ ಅನ್ನುವುದನ್ನು ಜನ ಗಮನಿಸುತ್ತಿದ್ದಾರೆ. ಸೌಜನ್ಯಳ ನ್ಯಾಯಕ್ಕಾಗಿ ಆಗ್ರಹಿಸುವ ಹೋರಾಟಗಾರರೇ ಮೊದಲು ಯೋಚಿಸಿ, ಅಪರಾಧಿ ಇನ್ನೂ ಸಮಾಜದಲ್ಲಿಆರಾಮವಾಗಿದ್ದಾನೆ ಮತ್ತು ಜೀವಂತವಾಗಿದ್ದಾನೆ.
ಹೌದು, ಸೌಜನ್ಯ ಹತ್ಯೆಯಲ್ಲಿ ಸಂತೋಷ್ ರಾವ್ ಅಪರಾಧಿ ಅಲ್ಲಅಂತ ಸಿಬಿಐ ವಿಶೇಷ ನ್ಯಾಯಾಲಯ ಹೇಳಿದೆ. ಹಾಗಿದ್ದ ಮೇಲೆ ಇದರ ಹಿಂದೆ ಬೇರೆ ಯಾರೋ ಇರಬೇಕಲ್ವೆ..? ಹಾಗಾದರೆ ಆ ನಿಜವಾದ ಆರೋಪಿ ಯಾರು..? ಸೌಜನ್ಯಳನ್ನು ಮುಕ್ಕಿ ತಿಂದವನು ಈಗ ಎಲ್ಲಿದ್ದಾನೆ? ಆತ ಎಲ್ಲಿಯವನು? ಅನ್ನುವ ಪ್ರಶ್ನೆಗಳಿಗೆ ಉತ್ತರ ಸಿಗಲೇಬೇಕಿದೆ. ಅಲ್ಲಿ ತನಕ ಇಟ್ಟ ಹೆಜ್ಜೆ ಗುರಿ ಮರೆಯಲೇಬಾರದು.
ನಿರಂತರ ಹೋರಾಟಗಳಿಂದಷ್ಟೇ ಸೌಜನ್ಯ ಪ್ರಕರಣ ಜೀವಂತವಾಗಿರುವುದಕ್ಕೆ ಸಾಧ್ಯ. ಹೀಗಾಗಿ ಅಪರಾಧಿ ಸಿಗುವ ತನಕ ಹೋರಾಟವನ್ನು ಜೀವಂತವಾಗಿರಿಸೋಣ. ನಿರಪರಾಧಿಗಳು ಅಪರಾಧಿಗಳು ಆಗುವುದು ಬೇಡ , ಅಪರಾಧಿಗಳು ತಪ್ಪಿಸಿಕೊಂಡು ಓಡಾಡುವುದು ಬೇಡ. ಸತ್ಯಾನ್ವೇಷಣೆಗೆ ಆ ಧರ್ಮಸ್ಥಳದ ಮಂಜುನಾಥ ಸ್ವಾಮಿ ಹಾಗೂ ಅಣ್ಣಪ್ಪ ಸ್ವಾಮಿ ದಾರಿ ತೋರಿಸಲಿ, ಶಕ್ತಿ ಕರುಣಿಸಲಿ ಅನ್ನೋದು ನ್ಯೂಸ್ ನಾಟೌಟ್ ಮಾಧ್ಯಮದ ಆಶಯವಾಗಿದೆ.