ನ್ಯೂಸ್ ನಾಟೌಟ್ : ಬೆಂಗಳೂರಿನ (Bengaluru) ಮಿಲಿಟರಿ (Military) ಎಂಇಜಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಯೋಧರೊಬ್ಬರು (Soldier) ಶುಕ್ರವಾರ ಅನಾರೋಗ್ಯದಿಂದ (Illness)ಕೊನೆಯುಸಿರೆಳೆದಿದ್ದಾರೆ. ಮಡಿಕೇರಿ (Madikeri) ತಾಲೂಕಿನ ಭಾಗಮಂಡಲ ಸಮೀಪದ ಸಣ್ಣಪುಲಿಕೋಟು ಗ್ರಾಮದ ಜಿತಿನ್ (31) ಉಸಿರು ಚೆಲ್ಲಿದ ಯೋಧ ಎಂದು ತಿಳಿದು ಬಂದಿದೆ.
ಸಣ್ಣಪುಲಿಕೋಟು ಗ್ರಾಮದ ಕಾಳಪ್ಪ ಮತ್ತು ದಮಯಂತಿ ಪುತ್ರರಾಗಿರುವ ಜಿತಿನ್ 2012ರಲ್ಲಿ ಮಿಲಿಟರಿ ಸೇವೆಗೆ ಸೇರಿದ್ದರು. 11 ವರ್ಷಗಳ ಸೇವೆಯನ್ನು ಪೂರೈಸಿದ ಇವರು ಆರಂಭದಲ್ಲಿ ಬೆಂಗಳೂರಿನಲ್ಲಿ ತರಬೇತಿಗೆ ಸೇರಿದ್ದರು. ಜಮ್ಮು ಹಾಗೂ ಸಿಕ್ಕಿಂನಲ್ಲಿ ಕರ್ತವ್ಯ ನಿರ್ವಹಿಸಿ ಬಳಿಕ ಬೆಂಗಳೂರಿನಲ್ಲಿ ನಾಯಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ವಿದೇಶಕ್ಕೆ ತೆರಳುವ ಉದ್ದೇಶದಿಂದ ಜಿತಿನ್ ಹೆಚ್ಚಿನ ತರಬೇತಿಯನ್ನು ಪಡೆಯುತ್ತಿದ್ದರು ಎಂದು ತಿಳಿದು ಬಂದಿದೆ.ದುರಂತವೆಂದರೆ ಪ್ಯಾರಾಚೂಟ್ ತರಬೇತಿ ಪಡೆಯುತ್ತಿದ್ದ ಸಂದರ್ಭ ಬಿದ್ದು ಅವರ ಕಿಡ್ನಿಗೆ ತೊಂದರೆಯಾಗಿತ್ತು.ಇದಕ್ಕೆ ಸೂಕ್ತ ಚಿಕಿತ್ಸೆಯನ್ನು ಪಡೆದಿದ್ದರು. ಇದಿಗ ತರಬೇತಿ ಮುಕ್ತಾಯ ಹಂತದಲ್ಲಿತ್ತು ಅನ್ನುವಾಗಲೇ ಈ ದುರ್ಘಟನೆ ಸಂಭವಿಸಿದೆ.
ಕೊನೆಯ ದಿನವಾದ ಶುಕ್ರವಾರ ಬೆಳಗ್ಗಿನ ಜಾವ ಓಟದ ಸಂದರ್ಭ ಕುಸಿದು ಬಿದ್ದಿದ್ದಾರೆ.ಅವರನ್ನು ಕಮಾಂಡೋ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿ ಬಳಿಕ ಐಸಿಯುಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ.
ಒಂದೂವರೆ ವರ್ಷಗಳ ಹಿಂದಷ್ಟೇ ಜಿತಿನ್ ವನಿತಾ ಎಂಬವರನ್ನು ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ. ಅವರ ಪತ್ನಿ ವೀರಾಜಪೇಟೆ ಎಸ್ಬಿಐ ಬ್ಯಾಂಕ್ ಉದ್ಯೋಗಿಯಾಗಿದ್ದು, ಆ ಕೆಲಸ ಬಿಟ್ಟು ಒಂದು ವರ್ಷದಿಂದ ಬೆಂಗಳೂರಿನಲ್ಲಿ ಪತಿಯೊಂದಿಗೆ ವಾಸವಿದ್ದರು.
ಜಿತಿನ್ ಅವರಿಗೆ ಸೇನಾ ಗೌರವ ಸಲ್ಲಿಸಿ ಶುಕ್ರವಾರ ಸಂಜೆ ಬೆಂಗಳೂರಿನಿಂದ ಕಳುಹಿಸಿಕೊಡಲಾಗಿದೆ. ಶನಿವಾರ ಸಣ್ಣಪುಲಿಕೋಟು ಮೇಲ್ಕಟ್ಟು ಶಾಲೆಯ ಮೈದಾನದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಿ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತ್ಯ ಸಂಸ್ಕಾರ ನೆರವೇರಿತು.