ನ್ಯೂಸ್ ನಾಟೌಟ್: ಮನುಷ್ಯ ಗಾಂಜಾ ಸೇವಿಸಿ ಅಮಲಿನಲ್ಲಿ ವರ್ತಿಸುವುದನ್ನು ನೋಡಿದ್ದೇವೆ. ಆದರೆ ಕುರಿಗಳು ಕೂಡ ಗಾಂಜಾ ಸೇವಿಸಿ ಯಾವ ರೀತಿ ವರ್ತಿಸಿವೆ ಅನ್ನುವ ವಿಚಾರ ಎಲ್ಲ ಕಡೆ ವೈರಲ್ ಆಗುತ್ತಿದೆ.
ಈ ಕುರಿ ಹಿಂಡು ಒಂದಲ್ಲ ಎರಡಲ್ಲ ಬರೋಬ್ಬರಿ 100 ಕೆ.ಜಿ ಗಾಂಜಾ ತಿಂದು ತೇಗಿವೆ. ಈ ಘಟನೆ ಗ್ರೀಸ್ ನ ಥೆಸ್ಸಾಲಿಯಾ ಅಲ್ಮಿರೋಸ್ ಪಟ್ಟಣದ ಬಳಿ ನಡೆದಿದೆ. ಇತ್ತೀಚೆಗೆ ಬಲ್ಗೇರಿಯಾ, ಗ್ರೀಸ್ , ಲಿಬಿಯಾ, ಟರ್ಕಿಯಲ್ಲಿ ಚಂಡಮಾರುತ ಬೀಸಿತ್ತು. ಈ ಹಿನ್ನೆಲೆಯಲ್ಲಿ ಆ ಜಾಗದಲ್ಲಿ ಕುರಿಗಳಿಗೆ ಆಶ್ರಯ ನೀಡಲಾಗಿದ್ದು ಕುರಿಗಳು ಹಾಯಾಗಿ ಮೇಯುತ್ತಿದ್ದವು. ದೊಡ್ಡ ಕುರಿಗಳ ಗುಂಪು ಹಸಿರ ಸಿರಿಯನ್ನು ಮನಸೋ ಇಚ್ಛೆ ಮೇಯುತ್ತಿದೆ ಬಿಡು ಎಂದು ಕುರುಬ ಸುಮ್ಮನೆ ಕುಳಿತುಕೊಂಡಿದ್ದ. ಈ ಸಂದರ್ಭದಲ್ಲಿ ಗ್ರೀನ್ ಹೌಸ್ ನಲ್ಲಿದ್ದ ಕುರಿ ಹಿಂಡು ಯಾಕೋ ವಿಚಿತ್ರವಾಗಿ ವರ್ತಿಸುತ್ತಿದೆಯಲ್ವಾ ಎಂದು ಕುರುಬನಿಗೆ ಅನ್ನಿಸುವುದಕ್ಕೆ ಶುರುವಾಯಿತು. ಈ ವೇಳೆ ಕುರಿಗಾಹಿ ಅದು ಏನು ತಿಂದಿದೆ ಅನ್ನುವುದನ್ನು ಚೆಕ್ ಮಾಡಿದ್ದಾನೆ. ಆಗ ಸತ್ಯ ವಿಚಾರ ಗೊತ್ತಾಗಿದೆ. ಈತನ ಗಮನಕ್ಕೆ ಬರುವಾಗಲೇ ಕುರಿಗಳು ಬರೋಬ್ಬರಿ 100 ಕೆ.ಜಿ ಗಾಂಜಾ ತಿಂದು ತೇಗಿದ್ದವು.
ಈ ಬಗ್ಗೆ ಕುರುಬ ಪ್ರತಿಕ್ರಿಯಿಸಿದ್ದು ಹೀಗೆ, ‘ಪ್ರವಾಹದಿಂದಾಗಿ ನಾವು ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಇಂಥದ್ದರಲ್ಲಿ ಈ ಕುರಿಗಳು ಹೀಗೆ ಮಾಡಿವೆ. ಇದನ್ನು ನೋಡಿ ನನಗೆ ನಗಬೇಕೋ ಅಳಬೇಕೋ ಗೊತ್ತೇ ಆಗಲಿಲ್ಲ. ಈ ವಿಷಯವಾಗಿ ನಿಜಕ್ಕೂ ನನಗೆ ಏನು ಹೇಳಬೇಕು ಗೊತ್ತಾಗುತ್ತಿಲ್ಲ’ ಎಂದಿದ್ದಾನೆ ಅವನು. ಫಾರ್ಮ್ನ ಮಾಲೀಕ ಯಾನ್ನಿಸ್ ಬೌರೌನಿಸ್, ‘ಹಸಿರು ಕಂಡು ತಕ್ಷಣ ತಿಂದುಬಿಟ್ಟಿವೆ. ಅವು ಮೇಕೆಗಳಿಗಿಂತಲೂ ಎತ್ತರದಲ್ಲಿ ಜಿಗಿಯುತ್ತಿದ್ದವು. ಇಷ್ಟು ಎತ್ತರದಲ್ಲಿ ಜಿಗಿದದ್ದನ್ನು ನಾ ಈತನಕ ನೋಡಿದ್ದೇ ಇಲ್ಲ’ ಎಂದಿದ್ದಾನೆ.
2017 ರಿಂದ ಔಷಧೀಯ ಉದ್ದೇಶಗಳಿಗಾಗಿ ಗ್ರೀಸ್ನಲ್ಲಿ ಗಾಂಜಾ ಕಾನೂನುಬದ್ಧವಾಗಿದೆ. 2023 ರಲ್ಲಿ ಮೊದಲ ಔಷಧೀಯ ಗಾಂಜಾ ಉತ್ಪಾದನಾ ಘಟಕವನ್ನು ಪ್ರಾರಂಭಿಸಿತು. ಔಷಧೀಯ ಬಳಕೆಗಾಗಿ ಗಾಂಜಾ ಬೆಳೆಸುತ್ತಿರುವುದರಿಂದ ದೇಶಕ್ಕೆ ಹೆಚ್ಚೆಚ್ಚು ಆರ್ಥಿಕ ಅವಕಾಶಗಳು ಒದಗಿವೆ ಎಂದು ಸ್ಥಳೀಯ ಮಾಧ್ಯಮಗಳ ವರದಿಯಿಂದ ತಿಳಿದು ಬಂದಿದೆ. 1936 ರಲ್ಲಿ ಇದನ್ನು ನಿಷೇಧಿಸುವ ಮೊದಲು ಕೌಂಟಿಯಲ್ಲಿ ಗಾಂಜಾ ಬೆಳೆಸಿ ಬೆಳೆಸಿತು ಮತ್ತು ರಫ್ತು ಮಾಡಲಾಗುತ್ತಿತ್ತು. ಬ್ರಿಟನ್, ಜರ್ಮನಿ, ಇಟಲಿ ಮತ್ತು ಡೆನ್ಮಾರ್ಕ್ ಸೇರಿದಂತೆ ಸಾಕಷ್ಟು ದೇಶಗಳಲ್ಲಿ ಗಾಂಜಾ ಉತ್ಪನ್ನಗಳನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ಉರುಗ್ವೆ ನಂತರ ಕೆನಡಾ 90 ವರ್ಷಗಳ ನಂತರ ಗಾಂಜಾ ನಿಷೇಧವನ್ನು ಹಿಂಪಡೆದು ಸಂಪೂರ್ಣ ಕಾನೂನುಬದ್ಧಗೊಳಿಸಿದ ವಿಶ್ವದ ಎರಡನೇ ದೇಶ ಎನ್ನಿಸಿಕೊಂಡಿದೆ.