ನ್ಯೂಸ್ ನಾಟೌಟ್: ಕೋರ್ಟ್ ನಲ್ಲಿ ನ್ಯಾಯದ ಪರ ವಕಾಲತ್ತು ಮಾಡುವ ವಕೀಲರು ಸಮಯ ಬಂದಾಗ ಸಮಾಜದ ಕೊಳೆಯನ್ನೂ ಕಿತ್ತೊಗೆಯಬಲ್ಲರು ಅನ್ನೋದು ನಿರೂಪಿತವಾಗಿದೆ.
ಹೌದು, ಸಾಮಾನ್ಯವಾಗಿ ಭಕ್ತರು ಶಬರಿಮಲೆ ಶ್ರೀ ಸ್ವಾಮಿ ಅಯ್ಯಪ್ಪನ ದರ್ಶನಕ್ಕೆ ತೆರಳಿ ಅಲ್ಲಿನ ಪಂಪಾ ನದಿಯಲ್ಲಿ ಸ್ವಚ್ಛತಾ ಅಭಿಯಾನ ಮಾಡುವುದನ್ನು ನೋಡಿದ್ದೇವೆ. ಇದೀಗ ಸುಳ್ಯದ ವಕೀಲರ ತಂಡವೊಂದು ಶಬರಿಮಲೆ ಅಯ್ಯಪ್ಪ ಸ್ವಾಮಿಯ ದರ್ಶನಕ್ಕೆ ಹೋದವರು ಅಲ್ಲಿನ ಪಂಪಾ ನದಿಯನ್ನು ಸ್ವಚ್ಛ ಮಾಡಿದ್ದಾರೆ. ಈ ಮಾದರಿ ಕೆಲಸದ ಫೋಟೋಗಳು ನ್ಯೂಸ್ ನಾಟೌಟ್ ಗೆ ಲಭ್ಯವಾಗಿದೆ.
ಗುರುಸ್ವಾಮಿ ಹಿರಿಯ ನ್ಯಾಯವಾದಿ ರಾಮಕೃಷ್ಣ ಅಮೈ ಅವರನ್ನೊಳಗೊಂಡ ವಕೀಲರ ತಂಡ ಶಬರಿಮಲೆಗೆ ಹೋಗಿದ್ದರು. ಈ ವೇಳೆ ಪಂಪಾ ನದಿಯಲ್ಲಿ ಆಗಿರುವ ಗಲೀಜು ಕಂಡು ಮರುಗಿದ ವಕೀಲರ ತಂಡ ನದಿಯನ್ನು ಸ್ವಚ್ಛ ಮಾಡುವುದಕ್ಕೆ ಮುಂದಾಯಿತು. ನದಿಯಲ್ಲಿ ತುಂಬಿದ್ದ ಬಟ್ಟೆ , ಕಸ, ಪ್ಲಾಸ್ಟಿಕ್ ಅನ್ನು ತೆಗೆದು ಸ್ವಚ್ಛತೆ ನಡಸಲಾಯಿತು. ಈ ಕಾರ್ಯಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ಈ ಹಿಂದೆ ಸುಳ್ಯದ ಶಬರಿಮಲೆ ಯಾತ್ರಾರ್ಥಿಗಳ ತಂಡವೊಂದು ಇದೇ ರೀತಿಯಲ್ಲಿ ಪಂಪಾ ನದಿಯನ್ನು ಸ್ವಚ್ಛಗೊಳಿಸಿ ಸುದ್ದಿಯಾಗಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈಬಗ್ಗೆ ಮಾತನಾಡಿದ ರಾಮಕೃಷ್ಣ ಅಮೈ , ನಮ್ಮ ಧಾರ್ಮಿಕ ಪುಣ್ಯ ಕ್ಷೇತ್ರಗಳನ್ನು ಮಲಿನಗೊಳಿಸಬಾರದು. ಇಂತಹ ಕ್ಷೇತ್ರಗಳನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸುವ ಕರ್ತವ್ಯ ನಮ್ಮ ಮೇಲಿದೆ. ವಿದ್ಯಾವಂತ ಸಮಾಜ ಕಸ ಬಿಸಾಡುವ ಮುನ್ನ ಯೋಚಿಸಬೇಕು.
ನಮ್ಮ ಪ್ರಧಾನ ಮಂತ್ರಿ ನರೇಂದ್ರ ಮೋದಿಯ ಸ್ವಚ್ಛ ಭಾರತ ಕನಸ್ಸನ್ನು ಸಾಕಾರಗೊಳಿಸೋಣ ಮತ್ತು ನಮ್ಮ ಈ ಸ್ವಚ್ಛತಾ ಕಾರ್ಯ ಸಮಾಜದಲ್ಲಿ ಜಾಗೃತಿಗಾಗಿ ಎಂದು ತಿಳಿಸಿದರು.