ನ್ಯೂಸ್ ನಾಟೌಟ್: ಮೈತ್ರಿ ಮುಟ್ಟಿನ ಕಪ್ ಯೋಜನೆಯ ಬೃಹತ್ ವಿತರಣಾ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರ ಚಾಲನೆ ನೀಡಿದೆ. ತಾಯಂದಿರಲ್ಲಿ ಹಾಗೂ ಹೆಣ್ಣು ಮಕ್ಕಳಲ್ಲಿ ಮುಟ್ಟಿನ ಕುರಿತು ಅರಿವು ಮೂಡಿಸುವ ಕೆಲಸಕ್ಕೆ ಕೈ ಹಾಕಿದೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ಕಾಂತಾರ ಖ್ಯಾತಿಯ ನಟಿ ಸಪ್ತಮಿ ಗೌಡ ಅವರನ್ನು ರಾಯಭಾರಿಯನ್ನಾಗಿ ಮಾಡಿದೆ.
ಈ ಕಾರ್ಯಕ್ರಮಕ್ಕೆ ಚಾಲನೆ ಬಳಿಕ ಮಾತನಾಡಿದ ನಟಿ ಸಪ್ತಮಿ ಗೌಡ ಮಾತನಾಡಿ, ‘‘ಶುಚಿ ನನ್ನ ಮೈತ್ರಿ‘ ಯೋಜನೆಯ ರಾಯಭಾರಿಯನ್ನಾಗಿ ನನ್ನನ್ನು ಆಯ್ಕೆ ಮಾಡಿದ್ದಕ್ಕೆ ಸರ್ಕಾರಕ್ಕೆ ನಾನು ಆಭಾರಿಯಾಗಿದ್ದೇನೆ. ಋತುಚಕ್ರದ ಕಾರಣಕ್ಕೆ ಹೆಣ್ಣುಮಕ್ಕಳು ಚಟುವಟಿಕೆಯಿಂದ ಹಿಂದೆ ಸರಿಯುವುದನ್ನು ತಡೆಯಲು ಮುಟ್ಟಿನ ಕಪ್ ಸಹಕಾರಿ. ನನ್ನ ವೈಯಕ್ತಿಕ ಅನುಭವದಿಂದ ಈ ಮಾತನ್ನು ಹೇಳುತ್ತಿದ್ದೇನೆ’‘ ಎಂದರು.
‘ನಾನು ಹದಿಹರೆಯದಲ್ಲಿದ್ದಾಗ ಮುಟ್ಟಿನ ಕಪ್ ಬಳಕೆ ಇರಲಿಲ್ಲ. ಆಗ ಬಳಸುತ್ತಿದ್ದ ಸ್ಯಾನಿಟರಿ ಪ್ಯಾಡ್ಗಳನ್ನು ವಿಲೇವಾರಿ ಮಾಡುವುದು ಸವಾಲಾಗಿತ್ತು. ಬಳಸಿದ ಪ್ಯಾಡ್ಗಳನ್ನು ಪೇಪರ್ಗಳಲ್ಲಿ ಸುತ್ತಿ, ಪ್ರತ್ಯೇಕವಾಗಿ ಎತ್ತಿಟ್ಟು, ಬಿಸಾಡುವುದು ಮುಜುಗರದ ವಿಷಯವಾಗಿತ್ತು. ಆದರೆ ಮುಟ್ಟಿನ ಕಪ್ ಈ ಎಲ್ಲ ಮುಜುಗರಗಳಿಂದ ಮುಕ್ತಿ ನೀಡಲಿದೆ’ ಎಂದರು.
‘ಒಬ್ಬ ಮಹಿಳೆ ಎಲ್ಲ ಋತುಚಕ್ರಗಳನ್ನು ಪೂರೈಸುವಾಗ ಸುಮಾರು 200 ಕೆ.ಜಿ.ಗಳಷ್ಟು ಸ್ಯಾನಿಟರಿ ಪ್ಯಾಡ್ಗಳನ್ನು ಬಳಸಬೇಕಾಗುತ್ತದೆ. ಇದರಿಂದ ಎಷ್ಟೊಂದು ತ್ಯಾಜ್ಯ ಉತ್ಪತ್ತಿಯಾಗುತ್ತದೆ ನೀವೇ ಊಹಿಸಿ. ಪರಿಸರ ಸಂರಕ್ಷಣೆಯ ದೃಷ್ಟಿಯಿಂದಲೂ ಮುಟ್ಟಿನ ಕಪ್ ಬಳಕೆ ಸೂಕ್ತ. ಇದರ ಬಳಕೆಯೂ ಸರಳ. ಶುಚಿತ್ವ ಕಾಪಾಡುವುದಕ್ಕೂ ಇದು ಸಹಕಾರಿ. ಕಪ್ ಬಳಸಿದರೆ, ಬಟ್ಟೆಯಲ್ಲಿ ಮುಟ್ಟಿನ ದ್ರವದಿಂದ ಉಂಟಾಗುವ ಕಲೆಗಳ ಬಗ್ಗೆ, ರಕ್ತ ಒಸರುವಿಕೆಯ ಬಗ್ಗೆ ಚಿಂತಿಸುವ ಅಗತ್ಯವೇ ಇಲ್ಲ. ಇವುಗಳ ನಿರ್ವಹಣೆಯೂ ಸುಲಭ. ಈ ಕಾರಣಕ್ಕಾಗಿಯೇ ದೇಶದ ಹಾಗೂ ಜಗತ್ತಿನ ಮಹಿಳೆಯರು ಮುಟ್ಟಿನ ಕಪ್ ಬಳಕೆಗೆ ಒಲವು ತೋರಿಸುತ್ತಿದ್ದಾರೆ’ ಎಂದರು.
‘ಮದುವೆಯಾಗದ ಹೆಣ್ಣುಮಕ್ಕಳು ಇದನ್ನು ಬಳಸಬಹುದೇ ಎಂಬ ಚಿಂತೆ ಅನೇಕ ತಾಯಂದಿರನ್ನು ಕಾಡುತ್ತಿದೆ. ನನ್ನ ತಾಯಿಗೂ ಇಂತಹದೇ ಚಿಂತೆ ಇತ್ತು. ಇದರ ಮಹತ್ವದ ಬಗ್ಗೆ ಮೊದಲು ತಾಯಂದಿರಲ್ಲಿ ಅರಿವು ಮೂಡಿಸಬೇಕು. ಇದನ್ನು ಬಳಸುವ ಪ್ರತಿಯೊಬ್ಬ ವಿದ್ಯಾರ್ಥಿನಿಯೂ ಈ ಯೋಜನೆಯ ರಾಯಭಾರಿಗಳಾಗಬೇಕು. ಇದರ ಪ್ರಯೋಜನಗಳ ಬಗ್ಗೆ ಹೆಚ್ಚು ಹೆಚ್ಚು ಮಾತನಾಡಿ ಇತರರೂ ಬಳಸುವಂತೆ ಪ್ರೇರೇಪಿಸಬೇಕು’ ಎಂದು ಸಪ್ತಮಿ ಗೌಡ ತಿಳಿಸಿದರು.