ಇನ್ನೂ ಅಲ್ಲಿ ಮೋಸ ಹೋದ ಎಷ್ಟು ಭಾರತೀಯರಿದ್ದಾರೆ ಗೊತ್ತಾ?
ನ್ಯೂಸ್ ನಾಟೌಟ್: ಉದ್ಯೋಗ ಮಾಹಿತಿ ನೀಡುವ ಏಜೆಂಟ್ ನೀಡಿದ ಅಧಿಕ ಸಂಬಳದ ಉದ್ಯೋಗದ ಆಸೆಗೆ ಕುವೈತ್ಗೆ ಹೋಗಿದ್ದ ವಿಜಯಪುರ ಜಿಲ್ಲೆಯ ಇಬ್ಬರು ಯುವಕರನ್ನು ಅಲ್ಲಿ ಕೆಲಸಕ್ಕಿಟ್ಟುಕೊಂಡಿದ್ದ ಮಾಲೀಕರು ಒಂಟೆ ಕಾಯುವ ಕೆಲಸ ನೀಡಿದ್ದಾರೆ ಎನ್ನಲಾಗಿದೆ.
ಒಂಟೆ ಕಾಯುವ ಕೆಲಸ ನೀಡಿದ ಆ ಮಾಲಿಕ ಸರಿಯಾಗಿ ವೇತನ ಹಾಗೂ ಹೊಟ್ಟೆ ತುಂಬ ಊಟವೂ ನೀಡದೆ ಹಿಂಸಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಕುರಿತು ವಿಜಯಪುರದ ಜಿಪಂ ಮಾಜಿ ಅಧ್ಯಕ್ಷ ಹಾಗೂ ಬಿಜೆಪಿ ನಾಯಕ ಉಮೇಶ ಕೊಳಕೂರ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಕರೆದು ಮಾಹಿತಿ ನೀಡಿದ್ದಾರೆ. ಕುವೈತ್ನಲ್ಲಿ ಬಬಲೇಶ್ವರ ತಾಲೂಕಿನ ಅಡವಿಸಂಗಾಪುರ ಗ್ರಾಮದ ಯುವಕರಾದ ಸಚಿನ್ ಜಂಗಮಶೆಟ್ಟಿ, ವಿಶಾಲ ಸೇಲರ ಎಂಬ ಇಬ್ಬರು ಯುವಕರಿಗೆ ಈ ಪರಿಸ್ಥಿತಿ ಎದುರಾಗಿದೆ.
ಸಂಸದ ರಮೇಶ ಜಿಗಜಿಣಗಿ ಹಾಗೂ ಭಾರತೀಯ ರಾಯಭಾರ ಕಚೇರಿ ನೆರವಿನಿಂದ ಈ ಇಬ್ಬರು ಯುವಕರು ತಾಯ್ನಾಡಿಗೆ ಮರಳಿದ್ದಾರೆ ಎನ್ನಲಾಗಿದೆ.
ಈ ಯುವಕರು ತಮ್ಮ ಗ್ರಾಮದ ಅಮೋಘಿ ಎಂಬ ವ್ಯಕ್ತಿ ಮೂಲಕ ಬಾಂಬೆ ಏಜೆಂಟ್ ಇಷ್ಕಾರ್ನನ್ನು ಸಂಪರ್ಕಿಸಿದ್ದಾರೆ.
ಆತ ಕುವೈತ್ನಲ್ಲಿ ತರಕಾರಿ ಪ್ಯಾಕಿಂಗ್ ಕೆಲಸ ಹಾಗೂ 32 ಸಾವಿರ ಸಂಬಳ (120 ದಿನಾರ್) ಕೊಡಿಸುವುದಾಗಿ ಹೇಳಿ ಇಬ್ಬರಿಂದ ತಲಾ .1 ಲಕ್ಷ ಪಡೆದುಕೊಂಡಿದ್ದಾನೆ.ಕುವೈತ್ಗೆ ಹೋದ ಬಳಿಕ ಮಾಲೀಕ ಇವರಿಬ್ಬರ ಪಾಸ್ಪೋರ್ಚ್, ಮೊಬೈಲ್ ಕಸಿದುಕೊಂಡು ಒಂಟೆ ಕಾಯುವ ಕೆಲಸ ಕೊಟ್ಟಿದ್ದರು ಎನ್ನಲಾಗಿದೆ. ಸುಮಾರು 6 ತಿಂಗಳು ಸರಿಯಾಗಿ ಊಟ ನೀಡದೆ, ಸಂಬಳ ಸಹ ಕೊಡದೆ ದುಡಿಸಿದ್ದಾರೆ. ನೊಂದ ಯುವಕರು ರಾತ್ರಿ ಕುಟುಂಬ ಸದಸ್ಯರಿಗೆ ಹೇಗೋ ಕರೆ ಮಾಡಿ ನೋವು ಹೇಳಿಕೊಂಡಿದ್ದಾರೆ.
ನಂತರ ಅಲ್ಲಿಂದ ಹೇಗೋ ತಪ್ಪಿಸಿಕೊಂಡು ಟ್ಯಾಕ್ಸಿಯಲ್ಲಿ ಭಾರತೀಯ ರಾಯಭಾರ ಕಚೇರಿ ತಲುಪಿ ತಮ್ಮ ಸಂಕಷ್ಟಹೇಳಿಕೊಂಡಿದ್ದಾರೆ. ಸುಮಾರು ಒಂದು ವಾರ ಅಲ್ಲೇ ಆಶ್ರಯ ಪಡೆದಿದ್ದಾರೆ. ವಂಚನೆ ಕುರಿತು ರಾಯಭಾರ ಕಚೇರಿಯಲ್ಲಿ ದೂರು ಸಲ್ಲಿಸಲಾಗಿದೆ. ತಾವು ಕೆಲಸ ಮಾಡಿದ ಸ್ಥಳದಲ್ಲಿ ಸುಮಾರು 70ಕ್ಕೂ ಅಧಿಕ ಭಾರತೀಯರು ಸಂಕಷ್ಟದಲ್ಲಿದ್ದಾರೆ ಎಂದು ಯುವಕರು ತಿಳಿಸಿದ್ದಾರೆ ಎಂದು ಯುವಕರು ಹೇಳಿದ್ದಾರೆ.