ನ್ಯೂಸ್ ನಾಟೌಟ್: ಆನ್ಲೈನ್ನಲ್ಲಿ 3 ಪ್ರತಿಷ್ಠಿತ ಏಜೆನ್ಸಿಗಳು ಬರೋಬ್ಬರಿ 28 ಕೋಟಿ ರೂ.ಗೆ ರಕ್ತ ಚಂದನವನ್ನು ಬಿಡ್ ಮಾಡಿದ್ದು, ಮಂಗಳೂರಿನ ಪಣಂಬೂರು ಬಂದರಿನ ಕಸಮ್ಸ್ ಅಧಿಕಾರಿಗಳು ವಶಕ್ಕೆ ಪಡೆದಿದ್ದ ರಕ್ತ ಚಂದನವನ್ನು ಅಧಿಕಾರಿಗಳು ಹರಾಜು ಮಾಡಿದ್ದಾರೆ.
2008ರಿಂದ 2023ರವರೆಗೆ 4 ಪ್ರಕರಣಗಳಲ್ಲಿ ಈ ರಕ್ತಚಂದನವನ್ನು ವಶಪಡಿಸಿಕೊಳ್ಳಲಾಗಿತ್ತು. ಸುಮಾರು 56.2 ಮೆಟ್ರಿಕ್ ಟನ್ ರಕ್ತಚಂದನವನ್ನು ಹರಾಜು ಹಾಕಲಾಗಿದ್ದು, ಮಂಗಳೂರು ಬಂದರಿನಿಂದ ಅಕ್ರಮವಾಗಿ ವಿದೇಶಕ್ಕೆ ಕಳ್ಳಸಾಗಾಟ ಮಾಡುತ್ತಿದ್ದ ರಕ್ತಚಂದನಗಳಾಗಿವೆ.
ಸುಪ್ರೀಂಕೋರ್ಟ್ ನಿರ್ದೇಶನದಂತೆ ರಾಜ್ಯ ಅರಣ್ಯ ಇಲಾಖೆ ಆನ್ಲೈನ್ ಮೂಲಕ ಹರಾಜು ಮಾಡುತ್ತದೆ. ಒಟ್ಟು 2,094 ದಿಮ್ಮಿಗಳನ್ನು ಒಳಗೊಂಡ 56.2 ಮೆಟ್ರಿಕ್ ಟನ್ ರಕ್ತಚಂದನ ಹರಾಜಿಗಿಡಲಾಗಿದೆ. ಎ ಕೆಟಗರಿ 3 ಲಾಟ್, ಬಿ ಕೆಟಗರಿ 6 ಲಾಟ್, ಸಿ ಕೆಟಗರಿ 6 ಲಾಟ್, ಡಿ ಕೆಟಗರಿ 3 ಲಾಟ್ ಗಳಾಗಿ ರಕ್ತಚಂದನವನ್ನು ವಿಂಗಡಣೆ ಮಾಡಲಾಗಿದೆ.
ಒಟ್ಟು 18 ಲಾಟ್ಗಳಲ್ಲಿ ನ್ಯಾಚುರಲ್ ಕನ್ನೊಜೆನ್ಸಿ ಏಜೆನ್ಸಿ 10 ಲಾಟ್ಗೆ 14.5 ಕೋಟಿ ರೂ. ಗೆ ಬಿಡ್ ಮೌಲ್ಯಗಳನ್ನು ನಿರ್ಧರಿಸಿದ್ದಾರೆ. ಯಮಾ ರಿಬನ್ಸ್ ಏಜೆನ್ಸಿ ಲಾಟ್ಗೆ 4.2ಕೋಟಿ ರೂ. ಬಿಡ್ ಮತ್ತು ಅಕ್ಷಾ 3 ಲಾಟ್ ಗೆ 1.6 ಕೋಟಿ ರೂ.ಗೆ ಬಿಡ್ ಮಾಡಿದೆ ಇದರ ಜೊತೆಗೆ ಒಟ್ಟು ಮೂರು ಬಿಡ್ಗಳ ಒಟ್ಟು ಮೊತ್ತ ತೆರಿಗೆ ಸೇರಿ 28 ಕೋಟಿ ರೂ. ಆಗಲಿದೆ ಎಂದು ಅಧಿಕಾರಿಗಳು ಅಂದಾಜು ಮಾಡಿದ್ದಾರೆ.
ಚೀನಾ, ದುಬೈ, ಜಪಾನ್ ಸೇರಿದಂತೆ ಇತರ ದೇಶಗಳಲ್ಲಿ ರಕ್ತಚಂದನಕ್ಕೆ ಬೇಡಿಕೆ ಇದ್ದು, 2012 ಆ.24ರಂದು ನವಮಂಗಳೂರು ಬಂದರು ಮೂಲಕ ದುಬೈಗೆ ಕಳ್ಳಸಾಗಾಟ ಮಾಡಲು ಕಂಟೈನರ್ನಲ್ಲಿ ತುಂಬಿಸಿಡಲಾಗಿದ್ದ 5,810 ಕೆ.ಜಿ. ತೂಕದ ರಕ್ತಚಂದನ ವಶಕ್ಕೆ ಪಡೆದಿದ್ದರು.
2014 ಆ.21ರಂದು ವಿದೇಶಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ 16.99 ಟನ್ ರಕ್ತಚಂದನವನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. 2020ರ ಜ.10ರಂದು ಥಾಯ್ಲೆಂಡ್ಗೆ ಸಾಗಿಸಲು ಯತ್ನಿಸುತ್ತಿದ್ದ 2.20 ಕೋಟಿ ರೂ. ಮೌಲ್ಯದ ರಕ್ತಚಂದನ ವಶ ಪಡಿಸಿಕೊಳ್ಳಲಾಗಿತ್ತು. 2022ರ ಜೂ.3ರಂದು ಆಂಧ್ರಪ್ರದೇಶದ ತಿರುಪತಿಯಿಂದ ಮಂಗಳೂರು ಮೂಲಕ ಸಿಂಗಾಪುರಕ್ಕೆ ಸಾಗಿಸಲು ಯತ್ನಿಸುತ್ತಿದ್ದ 4.14 ಕೋಟಿ ರೂ. ಮೌಲ್ಯದ ರಕ್ತಚಂದನ ವಶಪಡಿಸಿಕೊಳ್ಳಲಾಗಿತ್ತು ಇದನ್ನು ಈಗ ಅಧಿಕಾರಿಗಳು ಹರಾಜು ಮಾಡಲಾಗಿದೆ.