ನ್ಯೂಸ್ ನಾಟೌಟ್ : ರೈಲು ಬೋಗಿಗಳಲ್ಲಿನ ಇಲಿಗಳನ್ನು ಹಿಡಿಯಲು ರೈಲ್ವೆ ಇಲಾಖೆ ಮಾಡಿರುವ ವೆಚ್ಚದ ಮೊತ್ತವು ಈಗ ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಒಂದೊಂದು ಇಲಿ ಹಿಡಿಯುವುದಕ್ಕೂ ಸಾವಿರಾರು ರೂ. ಖರ್ಚು ಮಾಡಿರುವ ವಿಚಾರದ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ. ರೈಲ್ವೆ ಇಲಾಖೆಯಲ್ಲಿ ಭಾರಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಆಕ್ರೋಶವನ್ನು ವ್ಯಕ್ತಪಡಿಸಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ () ಕೇಳಲಾದ ಪ್ರಶ್ನೆಗೆ ಮಾಹಿತಿ ಒದಗಿಸಿರುವ ರೈಲ್ವೆ ಇಲಾಖೆಯು 168 ಇಲಿ ಹಿಡಿಯಲು 69 ಲಕ್ಷ ರೂಪಾಯಿ ವೆಚ್ಚ ಮಾಡಿರುವುದಾಗಿ ಹೇಳಿದೆ. ಇದೇ ವಿಷಯವನ್ನು ಮುಂದಿಟ್ಟುಕೊಂಡು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್ ಪಕ್ಷವು ರೈಲು ಇಲಾಖೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದು ಆರೋಪಿಸಿದೆ. 2020 ಮತ್ತು 2022ರಲ್ಲಿ ರೈಲು ಬೋಗಿಗಳಲ್ಲಿ ಇಲಿ ಹಿಡಿಯುವುದಕ್ಕಾಗಿ 69.5 ಲಕ್ಷ ರೂ. ವೆಚ್ಚ ಮಾಡಿರುವುದಾಗಿ ಲಕ್ನೋ ವಿಭಾಗವು ಮಾಹಿತಿ ನೀಡಿದೆ.
ಕಾರ್ಯಕರ್ತ ಚಂದ್ರಶೇಖರ್ ಗೌರ್ ಸಲ್ಲಿಸಿದ ಆರ್ಟಿಐ ಅರ್ಜಿಗೆ ಮಾಹಿತಿ ನೀಡಿರುವ ಲಕ್ನೋ ವಿಭಾಗವು ಈ ಎರಡು ವರ್ಷಗಳಲ್ಲಿ ಸುಮಾರು 69 ಲಕ್ಷ ರೂ. ವೆಚ್ಚ ಮಾಡಿ 168 ಇಲಿಗಳನ್ನು ಹಿಡಿಯಲಾಗಿದೆ ಎಂದು ಹೇಳಿದೆ. ಅಂದರೆ ಪ್ರತಿ ಇಲಿಗೆ ಇಲಾಖೆಯು ಸುಮಾರು 41 ಸಾವಿರ ರೂಪಾಯಿ ವೆಚ್ಚ ಮಾಡಿದೆ.
ಈ ಕುರಿತು ಎಕ್ಸ್ ವೇದಿಕೆಯಲ್ಲಿ ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲ ಅವರು, ಆರು ದಿನಗಳಲ್ಲಿ ಇಲಿ ಹಿಡಿಯಲು ಪ್ರತಿ ಇಲಾಖೆಗೆ 41 ಸಾವಿರ ರೂ. ಹಣವನ್ನು ಇಲಾಖೆ ವೆಚ್ಚ ಮಾಡಿದೆ. ಅಂದರೆ, ಮೂರು ವರ್ಷಗಳಲ್ಲಿ 168 ಇಲಿಗಳನ್ನು ಹಿಡಿಯಲು ರೈಲ್ವೆ ಒಟ್ಟು 69.40 ಲಕ್ಷ ರೂಪಾಯಿ ವೆಚ್ಚ ಮಾಡಿದೆ. ಇದು ಲಕ್ನೋ ವಿಭಾಗದ ಪರಿಸ್ಥಿ ಎಂದು ಹೇಳಿದ್ದಾರೆ.
ದೇಶದಾದ್ಯಂತ, ‘ಭ್ರಷ್ಟಾಚಾರದ ಇಲಿಗಳು’ ಪ್ರತಿದಿನ ಜನರ ಜೇಬುಗಳನ್ನು ಕತ್ತರಿಸುತ್ತಿವೆ. ಬಿಜೆಪಿ ಆಡಳಿತದಲ್ಲಿ, ಜನರು ಪ್ರತಿದಿನ ವಿಪರೀತ ಹಣದುಬ್ಬರದಿಂದ ಬಳಲುತ್ತಿದ್ದಾರೆ. ರೈಲು ಪ್ರಯಾಣ ದರದಲ್ಲಿ ವೃದ್ಧರಿಗೆ ನೀಡುತ್ತಿದ್ದ ರಿಯಾಯಿತಿಯನ್ನು ಸಹ ತಿನ್ನಲಾಗಿದೆ! ಮತ್ತೆ ಅವರು ಹೇಳುತ್ತಾರೆ – ‘ನಾನು ತಿನ್ನುವುದಿಲ್ಲ ಅಥವಾ ನಾನು ತಿನ್ನಲು ಬಿಡುವುದಿಲ್ಲ ..’ ಎಂದು ವ್ಯಂಗ್ಯವಾಗಿ ಕೇಂದ್ರ ಸರ್ಕಾರಕ್ಕೆ ತಿವಿದಿದ್ದಾರೆ.
ಕೇವಲ 163 ಇಲಿಗಳನ್ನು ಹಿಡಿಯಲು 69.5 ಲಕ್ಷ ರೂ. ವೆಚ್ಚ ಮಾಹಿತಿಯ ವಿವಾದವಾಗುತ್ತಿದ್ದಂತೆ ಉತ್ತರ ವಲಯ ರೈಲ್ವೆಯ ಲಕ್ನೋ ವಿಭಾಗವು ಸ್ಪಷಣೆ ನೀಡಿದೆ. ಈ ವೆಚ್ಚದಲ್ಲಿ ಫ್ಲಶಿಂಗ್ ಮಾಡುವುದು, ಕೋಚುಗಳನ್ನು ಸೋಂಕು ರಹಿತಗೊಳಿಸುವುದು, ಫಾಗಿಂಗ್ ಮಾಡುವುದು ಮತ್ತು ಕೀಟ ನಿಯಂತ್ರಣಗಳನ್ನು ಬಳಸುವುದು ಸೇರಿದೆ ಎಂದು ಹೇಳಿದೆ. ಲಕ್ನೋ ವಿಭಾಗದಲ್ಲಿ ನಿರ್ವಹಿಸುತ್ತಿರುವ ಎಲ್ಲಾ ಬೋಗಿಗಳಲ್ಲಿ ಜಿರಳೆಗಳು, ತಿಗಣೆಗಳು, ಸೊಳ್ಳೆಗಳ ಸಮಗ್ರ ನಿಯಂತ್ರಣಕ್ಕಾಗಿ ವರ್ಷಕ್ಕೆ 23.2 ಲಕ್ಷ ರೂ. ವೆಚ್ಚವಾಗಿದೆ ಎಂದು ರೈಲು ವಿಭಾಗವು ತಿಳಿಸಿದೆ.