ನ್ಯೂಸ್ ನಾಟೌಟ್: ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಸಂದೇಶವೊಂದರ ಬಗ್ಗೆ ಶ್ರೀರಾಮಚಂದ್ರಾಪುರ ಮಠ ಸ್ಪಷ್ಟನೆ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ಮಠದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬ್ರಾಹ್ಮಣ ಯುವಕರಿಗೆ ಉತ್ತರ ಭಾರತದ ಕನ್ಯೆಯರ ಜತೆ ವೈವಾಹಿಕ ಸಂಬಂಧ ಏರ್ಪಡಿಸುವ ಉದ್ದೇಶದಿಂದ ಅಧ್ಯಯನ ನಡೆಸಲು ಕನ್ಯೆಯರ ಪೋಷಕರನ್ನು ಒಳಗೊಂಡ ತಂಡವು ಕರಾವಳಿ ಕರ್ನಾಟಕಕ್ಕೆ ಬರುತ್ತಿದೆ. ಈ ತಂಡದ ಜೊತೆ ಸಂಪರ್ಕ ಮಾಡಿದವರ ಪೈಕಿ ರಾಮಚಂದ್ರಾಪುರ ಮಠದ ರಾಘವೇಶ್ವರಭಾರತೀ ಸ್ವಾಮೀಜಿಯ ಆಪ್ತರಾಗಿರುವವರು ಕೂಡ ಇದ್ದಾರೆ. ಆದ್ದರಿಂದ ಮೋಸ ಹೋಗಲು ಅವಕಾಶವಿಲ್ಲ’ ಎಂಬ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಶ್ರೀರಾಮಚಂದ್ರಾಪುರ ಮಠಕ್ಕೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಮಠವು ತನ್ನ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.
ಮಠದ ಜತೆ ನೇರ ಸಂಪರ್ಕ ಇರುವ ಯಾರೂ ಇಂಥ ವ್ಯವಸ್ಥೆಯಲ್ಲಿ ತೊಡಗಿಸಿಕೊಂಡಿಲ್ಲ. ಈ ಗುಂಪಿನ ಜೊತೆ ವ್ಯವಹರಿಸುವವರು ಸ್ವಂತ ವಿವೇಚನೆಯಿಂದ ನಿರ್ಧಾರ ಕೈಗೊಳ್ಳಬೇಕೇ ವಿನಾ ಇದಕ್ಕೆ ಮಠವಾಗಲೀ, ಮಠಕ್ಕೆ ಸಂಬಂಧಿಸಿದ ಯಾವುದೇ ಸಂಘಟನೆ, ಸಂಘ ಸಂಸ್ಥೆಯಾಲೀ ಹೊಣೆ ಆಗಿರುವುದಿಲ್ಲ. ವ್ಯವಹಾರ ನಡೆಸುವ ಮುನ್ನ ಮುನ್ನೆಚ್ಚರಿಕೆ ವಹಿಸಬೇಕು ಎಂದು ಶ್ರೀಮಠದ ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.