ನ್ಯೂಸ್ ನಾಟೌಟ್ : ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ವಾಹನಗಳನ್ನು ಶ್ರೀರಾಮಸೇನೆ ಕಾರ್ಯಕರ್ತರು ತಡೆದು, ವಾಹನಕ್ಕೆ ಬೆಂಕಿ ಇಟ್ಟ ಘಟನೆ ಇಂದು(ಸೆ.24) ಬೆಳಗ್ಗೆ 6 ಗಂಟೆಯ ಸುಮಾರಿಗೆ ದೊಡ್ಡಬಳ್ಳಾಪುರದಲ್ಲಿ ನಡೆದಿದೆ.
ದೊಡ್ಡಬಳ್ಳಾಪುರ ನಗರದ ಪ್ರವಾಸಿ ಮಂದಿರದ ಬಳಿ ಶ್ರೀರಾಮಸೇನೆ ಕಾರ್ಯಕರ್ತರು ಅನುಮಾನದ ಮೇರೆಗೆ ವಾಹನಗಳನ್ನು ತಡೆದು ಪರಿಶೀಲಿಸಿದ್ದು, ಈ ಸಂದರ್ಭ ವಾಹನಗಳಲ್ಲಿ ರಾಶಿ ರಾಶಿ ಗೋಮಾಂಸ ಪತ್ತೆಯಾಗಿದೆ. ಇದರಿಂದ ಆಕ್ರೋಶಗೊಂಡ ಶ್ರೀರಾಮ ಸೇನೆ ಕಾರ್ಯಕರ್ತರು ಗೋಮಾಂಸ ಸಾಗಾಟ ಮಾಡಿದ್ದ ಕಾರಿಗೆ ಬೆಂಕಿ ಇಟ್ಟು, ಆರೋಪಿಗಳನ್ನು ರಸ್ತೆಯಲ್ಲೇ ಕೂರಿಸಿ, ಸ್ಥಳಕ್ಕೆ ಜಿಲ್ಲಾಧಿಕಾರಿ ಬರುವಂತೆ ಪ್ರತಿಭಟನೆ ನಡೆಸಿ ಒತ್ತಾಯಿಸಿದ್ದಾರೆ.
ಶ್ರೀರಾಮಸೇನೆಯ ಪ್ರಧಾನ ಕಾರ್ಯದರ್ಶಿ ಸುಂದರೇಶ್ ನಗರಲ್ ಮಾತನಾಡಿ, “ಹಿಂದೂಪುರದಿಂದ ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಸುಮಾರು 7 ವಾಹನಗಳಲ್ಲಿ ಗೋಮಾಂಸ ರಫ್ತು ಮಾಡುತ್ತಿದ್ದರು. ಇದನ್ನು ಟೋಲ್ ಗೇಟ್ ಬಳಿ ನಮ್ಮ ಕಾರ್ಯಕರ್ತ ಪ್ರಶ್ನಿಸಿದ್ದಕ್ಕೆ ಆತನ ಮೇಲೆ ವಾಹನದಲ್ಲಿದ್ದವರು ಹ* ಲ್ಲೆಗೆ ಯತ್ನಿಸಿದ್ದಾರೆ.
ಹೀಗಾಗಿ ಒಂದು ವಾಹನವನ್ನು ನಾವು ಹಿಡಿದಿದ್ದೆವು. ತದನಂತರ 7 ವಾಹನಗಳು ಇದೇ ರೀತಿ ಬರಲಿವೆ ಎಂದು ಮೊದಲು ಹಿಡಿದ ವಾಹನದ ಚಾಲಕ ಮಾಹಿತಿ ನೀಡಿದ್ದಾನೆ. ಆ ಮಾಹಿತಿಯ ಆಧಾರದ ಮೇಲೆ ನಾವು ದೊಡ್ಡಬಳ್ಳಾಪುರದ ಸರ್ಕಲ್ನಲ್ಲಿ ಎಲ್ಲಾ ವಾಹನಗಳನ್ನು ಪರಿಶೀಲನೆ ನಡೆಸಿದೆವು.
ಈ ವಾಹನಗಳಲ್ಲಿ ಯಾರು ಮಾಂಸ ರಪ್ತು ಮಾಡುತ್ತಿದ್ದಾರೆ, ಎಲ್ಲಿಂದ ಬರುತ್ತಿದೆ, ಸರ್ಕಾರಕ್ಕೆ, ಅಧಿಕಾರಿಗಳಿಗೆ ಈ ಬಗ್ಗೆ ತಿಳಿದಿಲ್ಲವೇ? ಟೋಲ್ ಬಳಿ ಇರುವ ಪೊಲೀಸ್ ಅಧಿಕಾರಿಗಳೇನು ಮಾಡುತ್ತಿದ್ದರು” ಎಂದು ಪ್ರಶ್ನಿಸಿದ್ದಾರೆ. ದೊಡ್ಡಬಳ್ಳಾಪುರ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿ ನಿಯಂತ್ರಿಸಿದ್ದಾರೆ.