ನ್ಯೂಸ್ ನಾಟೌಟ್: ದಕ್ಷಿಣ ಕನ್ನಡ, ಉಡುಪಿ ಮತ್ತು ಚಿಕ್ಕಮಗಳೂರಿನಲ್ಲಿ ಸರ್ಕಾರಿ ಬಸ್ ಗಳಿಗಿಂತ ಖಾಸಗಿ ಬಸ್ ಗಳದ್ದೇ ಹಾವಳಿ. ಇತ್ತೀಚೆಗೆ ಮಂಗಳೂರಿನಲ್ಲಿ ಖಾಸಗಿ ಬಸ್ ಕಂಡೆಕ್ಟರ್ ರಸ್ತೆಗೆ ಎಸೆಯಲ್ಪಟ್ಟು ದುರಂತ ಅಂತ್ಯ ಕಂಡಿದ್ದ. ಈಗ ಮತ್ತೊಂದು ಘಟನೆ ಬೆಳಕಿಗೆ ಬಂದಿದ್ದು ಖಾಸಗಿ ಬಸ್ ವೊಂದು 15 ವರ್ಷದ ವಿದ್ಯಾರ್ಥಿನಿಯ ಜೀವವನ್ನೇ ಕಸಿದುಕೊಂಡಿದೆ.
ಬಸ್ಸಿಗಾಗಿ ಕಾಯುತ್ತಿದ್ದ ಶಾಲಾ ಮಕ್ಕಳ ಮೇಲೆ ಖಾಸಗಿ ಬಸ್ ಒಂದು ಹರಿದ ಪರಿಣಾಮ ವಿದ್ಯಾರ್ಥಿನಿಯೊಬ್ಬಳು ಕೊನೆಯುಸಿರೆಳೆದ ಘಟನೆ ಚಿಕ್ಕಮಗಳೂರಿನ ತರೀಕೆರೆ ತಾಲೂಕು ಕಾವಲ್ ದುಗ್ಲ ಪುರ ಗ್ರಾಮದಲ್ಲಿ ಗುರುವಾರ ಬೆಳಗ್ಗೆ ವರದಿಯಾಗಿದೆ.
ತುಳಸಿ (15) ದುರಂತ ಅಂತ್ಯ ಕಂಡ ವಿದ್ಯಾರ್ಥಿನಿ. ಗಂಭೀರವಾಗಿ ಗಾ* ಯಗೊಂಡ ನಿವೇದಿತ (14) ಎಂಬ ವಿದ್ಯಾರ್ಥಿನಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ.
ಅತಿ ವೇಗದಿಂದ ಬರುತ್ತಿದ್ದ ಖಾಸಗಿ ಬಸ್, ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆ ಹರಿದಿದೆ. ಇದರಿಂದ ತುಳಸಿ ಮತ್ತು ನಿವೇದಿತ ಗಂಭೀರ ಗಾ* ಯಗೊಂಡಿದ್ದರು. ತಕ್ಷಣ ಅವರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತುಳಸಿ ಕೊನೆಯುಸಿರೆಳೆದಿದ್ದಾರೆ. ಘಟನೆಯಲ್ಲಿ ಉಳಿದ ಐವರು ವಿದ್ಯಾರ್ಥಿಗಳು ಪಾರಾಗಿದ್ದಾರೆ ಎಂದು ವರದಿ ತಿಳಿಸಿದೆ. ಘಟನಾಸ್ಥಳಕ್ಕೆ ತರೀಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.