ನ್ಯೂಸ್ ನಾಟೌಟ್: ʻʻನೀವೊಬ್ಬರೇ ಸಿಎಂ ಆಗಬೇಕಾ..? ಬೇರೆ ಸಮುದಾಯಗಳಿಗೆ ಅವಕಾಶ ಸಿಗಬಾರದಾ? ಅತೀ ಹಿಂದುಳಿದ ಸಮುದಾಯದ ನಾಯಕರು (Backward community leaders) ಇದನ್ನೆಲ್ಲಾ ನೋಡಿಕೊಂಡು ಸಾಯಬೇಕಾ..?ʼʼ ಎಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಶ್ರೀ ಪ್ರಣವಾನಂದ ಸ್ವಾಮೀಜಿ (Pravananada Swameeji) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangalore Palace grounds) ನಡೆಯುತ್ತಿರುವ ಈಡಿಗ, ಬಿಲ್ಲವ, ನಾಮಧಾರಿ, ದೀವರು ಮತ್ತು ಅತೀ ಹಿಂದುಳಿದ ವರ್ಗಗಳ ಸಮಾನ ಮನಸ್ಕರ ಪೂರ್ವಭಾವಿ ಸಭೆಯಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಬಿ.ಕೆ. ಹರಿಪ್ರಸಾದ್ (BK Hariprasad) ಅವರಿಗೆ ಮಂತ್ರಿ ಸ್ಥಾನ ನೀಡದೆ ಇರುವ ಆಕ್ರೋಶವನ್ನು ಹೊರಹಾಕಿದ್ದಾರೆ.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರಣವಾನಂದ ಸ್ವಾಮೀಜಿ ಹಿಂದುಳಿದ ಸಮುದಾಯಗಳು ಅಧಿಕಾರ ಪಡೆದ ಹಿಂದಿನ ಘಟನಾವಳಿಗಳನ್ನು ನೆನಪು ಮಾಡಿಕೊಂಡರು. ʻʻಅಹಿಂದ ಹೆಸರಲ್ಲಿ ನಮ್ಮ ಹಕ್ಕು ಪಡೆಯಬೇಕು ಎಂದು ದೊಡ್ಡ ಹೋರಾಟಕ್ಕೆ ಆರ್ಥಿಕ ಶಕ್ತಿ ತುಂಬಿದವರು ಆರ್.ಎಲ್ ಜಾಲಪ್ಪ ಅವರು. ಆದರೆ ರಾಜ್ಯಕ್ಕೆ ಇಷ್ಟೊಂದು ಶಕ್ತಿ ಕೊಟ್ಟ ಹಿಂದುಳಿದ ವರ್ಗಗಳ ನಾಯಕರು ಏನಾಗಿದ್ದಾರೆ? ರಾಜ್ಯದಲ್ಲಿ ಅಧಿಕಾರ ನಡೆಸಿರುವ ಸರ್ಕಾರಗಳು ಹಿಂದುಳಿದ ವರ್ಗಕ್ಕೆ ಏನು ಕೊಟ್ಟಿವೆ?ʼʼ ಎಂದು ಪ್ರಶ್ನಿಸಿದರು.
ʻʻಈಡಿಗ, ಬಿಲ್ಲವ, ನಾಮಧಾರಿ ಸಮುದಾಯ ಭಿಕ್ಷೆ ಬೇಡುವ ಸಮುದಾಯ ಅಲ್ಲ. ಈ ರಾಜ್ಯಕ್ಕೆ ಕೊಡುಗೆ ಕೊಟ್ಟ ಸಮುದಾಯ ಅದು. ಆದರೆ ಆ ಸಮುದಾಯದ ನಾಯಕರನ್ನು ಇಂದು ಷಡ್ಯಂತ್ರದಿಂದ ತುಳಿಯಲಾಗಿದೆ. ದೇವರಾಜು ಅರಸು ಸಿಎಂ ಆದಾಗ ಬಂಗಾರಪ್ಪ ಅವರನ್ನು ಸಚಿವ ಸಂಪುಟಕ್ಕೆ ತೆಗೆದುಕೊಳ್ಳಬಾರದು ಅಂತ ದೆಹಲಿಯಿಂದ ಪತ್ರ ಬರುತ್ತದೆ. ಆದರೂ ದೇವರಾಜ್ ಅರಸು ಅವರು ಬಂಗಾರಪ್ಪ ಅವರನ್ನು ಸಂಪುಟಕ್ಕೆ ತೆಗೆದುಕೊಂಡರು. ಆದರೆ ಈಗ ಇಲ್ಲಿಂದ ಲೆಟರ್ ಹೋಗುತ್ತದೆ. ಇಂಥವರಿಗೆ ಸಚಿವ ಸ್ಥಾನ ಕೊಡಬಾರದು ಅಂತ ಇಲ್ಲಿಂದ ದೆಹಲಿಗೆ ಪತ್ರ ಹೋಗುತ್ತದೆ. ಪರಿಸ್ಥಿತಿ ಹೇಗೆ ಬದಲಾಗಿದೆ ನೋಡಿʼʼ ಎಂದು ಬಿ.ಕೆ. ಹರಿಪ್ರಸಾದ್ ಅವರ ಹೆಸರನ್ನು ಹೇಳದೆಯೇ ಸ್ವಾಮೀಜಿ ನುಡಿದರು.