ನ್ಯೂಸ್ ನಾಟೌಟ್: ವಿವಾದಗಳಿಂದ ಸುದ್ದಿಯಲ್ಲಿರುವ ನಟ ಪ್ರಕಾಶ್ ರಾಜ್ ಈಗ ಮತ್ತೊಂದು ಸುದ್ದಿಯಲ್ಲಿದ್ದಾರೆ. ಪ್ರಕಾಶ್ ರಾಜ್ ತನ್ನ ಅನಿಸಿಕೆಗಳನ್ನು ನೇರವಾಗಿ ಹೇಳುತ್ತಾ ಒಂದು ವರ್ಗದ ಜನರ ಕೋಪಕ್ಕೆ ಕಾರಣಿಕರ್ತರಾಗಿದ್ದಾರೆ. ಈ ಬೆನ್ನಲ್ಲೇ ಇದೀಗ ಪ್ರಕಾಶ್ ರಾಜ್ ಗೆ ಬೆದರಿಕೆ ಹಾಕುವ ವಿಡಿಯೋಗಳನ್ನು ಕೂಡ ಅಪ್ಲೋಡ್ ಮಾಡಲಾಗಿದ್ದು ಆ ಚಾನೆಲ್ ವಿರುದ್ಧ ದೂರು ದಾಖಲಾಗಿದೆ.
ಅದಕ್ಕೆ ಸಂಬಂಧಿಸಿದಂತೆ ಪ್ರಕಾಶ್ ರಾಜ್ ದೂರು ನೀಡಿದ್ದರು. ಈಗ ಆ ಯೂಟ್ಯೂಬ್ ವಾಹಿನಿ (YouTube Channel) ವಿರುದ್ಧ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಬೆಂಗಳೂರಿನ ಅಶೋಕ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಐಪಿಸಿ ಸೆಕ್ಷನ್ 506, 504, 505(2) ಸೆಕ್ಷನ್ ಅಡಿಯಲ್ಲಿ ಮೊಕದ್ದಮೆ ದಾಖಲಾಗಿದೆ.
ಯೂಟ್ಯೂಬ್ ಚಾನೆಲ್ನಲ್ಲಿ ಆಗಸ್ಟ್ 14ರಂದು ಜೀವ ಬೆದರಿಕೆ ಹಾಕುವ ಸಂದೇಶದ ರೀತಿಯಲ್ಲಿ ಸುದ್ದಿ ಪ್ರಸಾರ ಮಾಡಲಾಗಿತ್ತು. ಅಪ್ಲೋಡ್ ಮಾಡಿರುವ 2 ವಿಡಿಯೋಗಳಲ್ಲೂ ಬೆದರಿಕೆ ಹಾಕಲಾಗಿದೆ ಎಂದು ಪ್ರಕಾಶ್ ರಾಜ್ ಆರೋಪಿಸಿದ್ದಾರೆ.
ಪ್ರಕಾಶ್ ರಾಜ್ ಮಾತ್ರವಲ್ಲದೇ ಅವರ ಕುಟುಂಬದವರಿಗೂ ಜೀವ ಬೆದರಿಕೆ ಹಾಕಿದ ಆರೋಪದಲ್ಲಿ ಯೂಟ್ಯೂಬ್ ವಾಹಿನಿ ವಿರುದ್ಧ ದೂರು ನೀಡಲಾಗಿದೆ. ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಪ್ರಕಾಶ್ ರಾಜ್ ನೀಡಿದ ದೂರಿನ ಅನ್ವಯ ಯೂಟ್ಯೂಬ್ ವಾಹಿನಿಯ ಮುಖ್ಯಸ್ಥ ಮತ್ತು ಸಿಬ್ಬಂದಿ ವಿರುದ್ಧ ಅಶೋಕ ನಗರ ಠಾಣೆ ಪೊಲೀಸರು ಎಫ್ಐಆರ್ ದಾಖಲು ಮಾಡಿದ್ದಾರೆ. ಸದ್ಯ ತನಿಖೆ ಆರಂಭ ಆಗಿದೆ.