ನ್ಯೂಸ್ ನಾಟೌಟ್: ಕಳೆದ ಮೂರು ವರ್ಷಗಳ ಹಿಂದೆ ಜಗತ್ತನ್ನೆ ತಲ್ಲಣ ಗೊಳಿಸಿದ ಕೋವಿಡ್ ಸಾಂಕ್ರಾಮಿಕ ರೋಗದ ಪ್ರಭಾವ ಕಡಿಮೆಯಾಗುತ್ತಿದ್ದಂತೆ ಇದೀಗ ನಿಫಾ ವೈರಸ್ ಹಾವಳಿ ಮತ್ತೇ ಆತಂಕ ಸೃಷ್ಟಿಸಿದೆ. ಕೇರಳದ ಕೋಝಿಕ್ಕೋಡ್ ನಲ್ಲಿ ನಿಫಾ ವೈರಸ್ ಸೋಂಕಿನಿಂದ ಮಂಗಳವಾರ ಇಬ್ಬರು ಮೃತಪಟ್ಟಿದ್ದಾರೆ. ಅಲ್ಲದೇ ಈ ಸೋಂಕಿಗೆ ಹಲವಾರು ಮಂದಿ ತುತ್ತಾಗಿದ್ದಾರೆ. ಇದರಲ್ಲಿ ಒಂಬತ್ತು ವರ್ಷದ ಬಾಲಕನೂ ಸೇರಿದ್ದಾನೆ ಎಂದು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಮಾಧ್ಯಮಕ್ಕೆ ತಿಳಿಸಿದ್ದಾರೆ.
ನಿಫಾ ವೈರಸ್ ಪ್ರಕರಣ ತೀವ್ರವಾಗುತ್ತಿದ್ದಂತೆ ಕೇರಳದಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಕೋಝಿಕ್ಕೋಡ್ ಜಿಲ್ಲಾಧಿಕಾರಿ ಎ ಗೀತಾ ಫೇಸ್ಬುಕ್ ಪೋಸ್ಟ್ ಮೂಲಕ ಮಾಹಿತಿ ನೀಡಿದ್ದು, ಅತಂಚೇರಿ, ಮಾರುತೋಂಕರ, ತಿರುವಳ್ಳೂರು, ಕುಟ್ಟಿಯಾಡಿ, ಕಾಯಕ್ಕೋಡಿ, ವಿಲೈಪಲ್ಲಿ ಮತ್ತು ಕವಿಲುಂಪಾರ ಗ್ರಾಮ ಪಂಚಾಯತ್ಗಳನ್ನು ಕಂಟೈನ್ಮೆಂಟ್ ವಲಯಗಳನ್ನಾಗಿ ಘೋಷಿಸಲಾಗಿದೆ. ಅಲ್ಲದೇ ಈ ಗ್ರಾಮ ಪಂಚಾಯತ್ಗಳ ಸುತ್ತಲೂ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರದ ಆದೇಶದ ಪ್ರಕಾರ ಮೆಡಿಕಲ್ ಸ್ಟೋರ್ಗಳನ್ನು ಮಾತ್ರ ತೆರೆಯಲು ಮಾತ್ರ ಅನುಮತಿ ನೀಡಲಾಗಿದೆ.
ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಬೆಳಗ್ಗೆ 7 ರಿಂದ ಸಂಜೆ 5 ರವರೆಗೆ ತೆರೆಯಲು ಅನುಮತಿಸಲಾಗಿದೆ ಎಂದು ಡಿಎಂ ಆದೇಶಿಸಿದರು. ಸ್ಥಳೀಯ ಸ್ವಯಂ ಸರ್ಕಾರಿ ಸಂಸ್ಥೆಗಳು ಮತ್ತು ಗ್ರಾಮ ಕಚೇರಿಗಳು ಕನಿಷ್ಠ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಲು ಸೂಚಿಸಲಾಗಿದೆ. ಬ್ಯಾಂಕ್ಗಳು, ಇತರ ಸರ್ಕಾರಿ ಅಥವಾ ಅರೆ ಸರ್ಕಾರಿ ಸಂಸ್ಥೆಗಳು, ಶಿಕ್ಷಣ ಸಂಸ್ಥೆಗಳು ಮತ್ತು ಅಂಗನವಾಡಿಗಳು ಕಾರ್ಯನಿರ್ವಹಿಸಬಾರದು ಎಂದು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಸಾರ್ವಜನಿಕರು ಪರ್ಯಾಯವಾಗಿ ಆನ್ಲೈನ್ ಸೇವೆಗಳನ್ನು ಬಳಸಲು ಸೂಚಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೇರಳದಲ್ಲಿ ನಿಫಾ ವೈರಸ್ ಹಾವಳಿ ವೇಗ ಪಡೆಯುತ್ತಿದ್ದಂತೆ ಕೇರಳ ಸಂಪರ್ಕಿಸುವ ಕರಾವಳಿ ಭಾಗದ ಜನರಲ್ಲಿ ಆತಂಕ ಮನೆ ಮಾಡಿದೆ. ಪ್ರತಿನಿತ್ಯ ಕೇರಳದಿಂದ ಹೆಚ್ಚಿನ ಸಂಖ್ಯೆಯ ಜನರು ಪಕ್ಕದ ಮಂಗಳೂರಿಗೆ ಉದ್ಯೋಗ ಮತ್ತಿತರ ವ್ಯವಹಾರಕ್ಕಾಗಿ ರೈಲಿನ ಮೂಲಕ ಆಗಮಿಸುತ್ತಾರೆ. ಇದೀಗ ಕೇರಳದಿಂದ ನಿಫಾ ವೈರಸ್ ಸೋಂಕಿತ ವ್ಯಕ್ತಿ ಮಂಗಳೂರಿಗೆ ಬಂದರೆ ಆತನಿಂದ ಇತರರಿಗೂ ಶೀಘ್ರವಾಗಿ ಹರಡುವ ಸಾಧ್ಯತೆಯಿದೆ. ಈ ಬಗ್ಗೆ ದ.ಕ. ಆರೋಗ್ಯ ಇಲಾಖೆ ರೈಲು ಮತ್ತು ಬಸ್ ನಿಲ್ದಾಣಗಳಲ್ಲಿ ಮುನ್ನೆಚ್ಚರಿಕಾ ಕ್ರಮ ವಹಿಸಬೇಕಾಗಿದೆ.
ಈ ವೈರಸ್ ನಿಪಾಹ್ ಝೂನೋಸಿಸ್ ಮಾದರಿಯ ವೈರಾಣಾಗಿದ್ದು, ಇದು ಮನುಷ್ಯ ಮತ್ತು ಪ್ರಾಣಿಗಳಲ್ಲಿ ಹಲವು ರೀತಿಯ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಸಾಮಾನ್ಯವಾಗಿ ಈ ನಿಫಾ ವೈರಾಣುಗಳು ಬಾವಲಿಯಿಂದ ಹರಡುವ ವೈರಸ್ ಆಗಿವೆ. ಈ ವೈರಸ್ ಸೋಂಕು ತಗುಲಿರುವ ವ್ಯಕ್ತಿಯ ಸಂಪರ್ಕಕ್ಕೆ ಬೇರೆ ವ್ಯಕ್ತಿ ಬಂದರೆ ಅಂದರೆ, ಸೋಂಕಿನಿಂದ ಕೂಡಿದ ವ್ಯಕ್ತಿಯ ಜೊಲ್ಲು, ಎಂಜಲು, ಅಥವಾ ವಾಂತಿಯ ಸ್ಪರ್ಶವಾದರೆ ಈ ವೈರಾಣು ಬೇರೊಬ್ಬರಿಗೆ ಹರಡುತ್ತದೆ. ಅಲ್ಲದೇ ಪ್ರಾಣಿ ಅಥವಾ ಪಕ್ಷಿಗಳಿಂದಲೂ ಸೋಂಕು ಹರಡುವ ಸಾಧ್ಯತೆ ಇದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಈ ನಿಫಾ ವೈರಾಣು ಮೂಲಸ್ಥಾನ ಪ್ಟೆರೋಪೋಡಿಡೇ ಬಾವಲಿ ಕುಟುಂಬ ಎನ್ನಲಾಗಿದೆ. ಈ ಜಾತಿಯ ಬಾವಲಿಗಳ ಮುಖಾಂತರ ಈ ಮಾರಕ ವೈರಾಣು ಹರಡುತ್ತಿದೆ. ಈ ಜಾತಿಯ ಬಾವಲಿಗಳು ತಿಂದು ಬಿಸಾಡಿದ ಅಥವಾ ಈ ಬಾವಲಿಗಳ ಜೊಲ್ಲು, ಮೂತ್ರ ಬಿದ್ದ ವಸ್ತುಗಳ ಸ್ಪರ್ಶವಾದರೂ ಈ ಸೋಂಕು ಹರಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ನಿಫಾ ಸೋಂಕು ಮನುಷ್ಯನ ದೇಹ ಸೇರಿದರೆ ಮೊದಲು ಮೆದುಳಿನ ನರಮಂಡಲದ ಮೇಲೆ ದಾಳಿ ಮಾಡುತ್ತವೆ. ವೈರಾಣು ಪತ್ತೆಯಾಗಲು 5ರಿಂದ 14 ದಿನಗಳು ಬೇಕಾಗುತ್ತದೆ. ಇದರಿಂದ ಸಾಮಾನ್ಯ ಜ್ವರ, ವಿಪರೀತ ತಲೆನೋವು, ಅತಿಯಾದ ಆಯಾಸ, ಅತಿಯಾದ ನಿದ್ರಾಹೀನತೆ, ದಿಗ್ಭ್ರಮೆ ಮತ್ತು ಮಾನಸಿಕ ಗೊಂದಲ ಉಂಟಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಉಸಿರಾಟದ ತೊಂದರೆ ಕೂಡ ಕಾಣಿಸಿಕೊಂಡಿದೆ. ಈ ಸೋಂಕು ಎಷ್ಟು ಮಾರಕ ಎಂದರೆ, ಕೇವಲ 24 ರಿಂದ 48 ಗಂಟೆಗಳಲ್ಲೇ ಸೋಂಕು ಪೀಡಿತ ವ್ಯಕ್ತಿ ಕೋಮಾಗೆ ಜಾರುವ ಅಪಾಯವಿದೆ. ಅಲ್ಲದೆ ಸಾವು ಕೂಡ ಸಂಭವಿಸಬಹುದು ಎಂದು ವೈದ್ಯರು ತಿಳಿಸಿದ್ದಾರೆ.