ನ್ಯೂಸ್ ನಾಟೌಟ್ : ಇಡೀ ವಿಶ್ವವೇ ಭಾರತದತ್ತ ತಿರುಗಿ ನೋಡುವಂತ ಕೆಲಸವನ್ನು ಇಸ್ರೋ ವಿಜ್ಞಾನಿಗಳು ಮಾಡಿದ್ದಾರೆ. ಚಂದ್ರಯಾನ-3 ಯಶಸ್ಸು ಭಾರತಕ್ಕೆ ಐತಿಹಾಸಿಕ ಮನ್ನಣೆಯನ್ನೇ ತಂದುಕೊಟ್ಟಿದೆ.ಆದರೆ ಚಂದ್ರಯಾನ -3 ಯಶಸ್ಸಿನಲ್ಲಿ ತನ್ನ ಸೇವೆಯನ್ನು ನೀಡಿದ ವ್ಯಕ್ತಿಯೊಬ್ಬನ ಬದುಕನ್ನು ನೀವು ನೋಡಿದ್ರೆ ದಂಗಾಗಿ ಹೋಗ್ತಿರಾ..
ಹೌದು, ಇಸ್ರೋ ಚಂದ್ರಯಾನ-3 ಯಶಸ್ಸಿನಲ್ಲಿ ತಂತ್ರಜ್ಞನಾಗಿ ಪಾಲ್ಗೊಂಡಿದ್ದ ಮಧ್ಯಪ್ರದೇಶದ ಹರ್ದಾ ಜಿಲ್ಲೆಯ ದೀಪಕ್ ಕುಮಾರ್ ಉಪ್ರಾರಿಯಾ ಅವರ ಜೀವನ ಭಾರಿ ಕಷ್ಟದ ಹಾದಿಯಲ್ಲಿದೆ.ಇಸ್ರೋದಂತಹ ಪ್ರತಿಷ್ಟಿತ ಸಂಸ್ಥೆಯಲ್ಲಿ ಕೆಲಸ ಮಾಡಿದವರು ಇಂದು ರಸ್ತೆಬದಿಯಲ್ಲಿ ಇಡ್ಲಿ ಮಾರುವ ಸ್ಥಿತಿಗೆ ತಲುಪಿದ್ದಾರೆ..!
ಮೂಲತಃ ಮಧ್ಯಪ್ರದೇಶದ ಹರ್ದಾ ಜಿಲ್ಲೆಯವರಾದ ದೀಪಕ್ ಉಪ್ರಾರಿಯಾ ಅವರು ಈ ಕೆಲಸ ಮಾಡುವಂತಹ ವ್ಯಕ್ತಿ.2012ರಲ್ಲಿ ಖಾಸಗಿ ಕಂಪನಿಯೊಂದರ ಕೆಲಸ ಬಿಟ್ಟು ₹ 8,000 ಸಂಬಳಕ್ಕೆ ಎಚ್ಇಸಿ(ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್) ಸೇರಿದ್ದರು. ಸರ್ಕಾರಿ ಕಂಪೆನಿಯಾದ ಹೆವಿ ಇಂಜಿನಿಯರಿಂಗ್ ಕಾರ್ಪೊರೇಷನ್ ಲಿಮಿಟೆಡ್ ಇಸ್ರೋದ ಚಂದ್ರಯಾನ-3 ಯ ಉಡಾವಣಾ ಪ್ಯಾಡ್ ನಿರ್ಮಿಸಿದೆ. ಇದಕ್ಕಾಗಿ ಸುಮಾರು 2,800 ಟೆಕ್ನೀಶಿಯನ್ ಅವಶ್ಯಕತೆ ಇದ್ದು, ಇವರು ಆ ಟೀಂನಲ್ಲಿ ಗುರುತಿಸಿಕೊಂಡಿದ್ದರು.ಇವರ ನಿರಂತರ ಶ್ರಮದಿಂದಾಗಿ ಇಂದು ಈ ಯಶಸ್ಸಿಗೂ ಕಾರಣವಾಗಿತ್ತು.
ಚಂದ್ರಯಾನ ೩ರ ಯಶಸ್ಸಿನ ಬಗ್ಗೆ ಸ್ವತಃ ಪ್ರಧಾನಿ ಮೋದಿಯವರೇ ಕೊಂಡಾಡಿದ್ದರು.ಹರ್ಷವನ್ನು ವ್ಯಕ್ತಪಡಿಸಿದ್ದರು. ಆದರೆ ಇತರ ಕಡೆ ಎಚ್ಇಸಿಯ ನೌಕರರು ತಮ್ಮ 18 ತಿಂಗಳ ಬಾಕಿ ವೇತನಕ್ಕಾಗಿ ಪ್ರತಿಭಟಿಸುತ್ತಿದ್ದರೆ , ಇತ್ತ ಉಪ್ರಾರಿಯಾ ಅವರು ರಾಂಚಿಯ ಧುರ್ವಾ ಪ್ರದೇಶದಲ್ಲಿರುವ ಹಳೆಯ ವಿಧಾನ ಸಭೆ ಎದುರು ಇಡ್ಲಿ ಅಂಗಡಿಯನ್ನು ತೆರೆದು ಸಣ್ಣ ಉದ್ಯಮ ಶುರು ಮಾಡಿದ್ದಾರೆ.
ನಾನು ಆರ್ಥಿಕವಾಗಿ ತೊಂದರೆ ಅನುಭವಿಸುತ್ತಿದ್ದೇನೆ.ಲಕ್ಷಾಂತರ ರೂ. ಸಾಲವೂ ಇದೆ.ಇಬ್ಬರು ಹೆಣ್ಣು ಮಕ್ಕಳು ಶಾಲೆಗೆ ಹೋಗುತ್ತಿರೋದ್ರಿಂದ ನನ್ನ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ. ಹೀಗಾಗಿ ಎರಡೆರಡು ಕೆಲಸವನ್ನು ನಿಭಾಯಿಸುತ್ತಿದ್ದೇನೆ ಎಂದಿದ್ದಾರೆ. ಬೆಳಗ್ಗೆ ಇಡ್ಲಿ ಮಾರುತ್ತೇನೆ. ಮಧ್ಯಾಹ್ನ ಆಫೀಸ್ ಕೆಲಸಕ್ಕೆ ಹೋಗುತ್ತೇನೆ ಎಂದು ತಮ್ಮ ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.
ಶಾಲೆಯಲ್ಲೂ ನನ್ನ ಮಕ್ಕಳು ತೀರಾ ಅವಮಾನವನ್ನು ಎದುರಿಸುತ್ತಿದ್ದಾರೆ. ಫೀಸ್ ಕಟ್ಟಲಾಗದೇ ಪದೇ ಪದೇ ನೋಟೀಸನ್ನು ಮನೆಗೆ ಕಳುಹಿಸುತ್ತಿದ್ದಾರೆ.ಕ್ಲಾಸ್ನಲ್ಲಿಯೂ ಫೀಸ್ ಕಟ್ಟದ ಲಿಸ್ಟ್ನಲ್ಲಿ ನಮ್ಮ ಮಕ್ಕಳ ಹೆಸರಿದೆ.ಇದನ್ನ ಸಹಿಸಿಕೊಳ್ಳಲಾಗುತ್ತಿಲ್ಲ ಎಂದವರು ಹೇಳಿದ್ದು, ಮಕ್ಕಳು ಅಳುತ್ತಾ ಬರೋದನ್ನು ಕಂಡಾಗ ಹೃದಯವೇ ಒಡೆದುಹೋದ ಅನುಭವ ನನಗಾಗುತ್ತೆ ಎಂದು ಹೇಳಿದ್ದಾರೆ.
ಪತ್ನಿಯ ಒಡವೆಗಳನ್ನು ಅಡವಿಟ್ಟು ಕೆಲ ದಿನ ಮನೆ ನಡೆಸಿದೆ.ಆದರೂ ಜೀವನ ನಿರ್ವಹಣೆ ಮಾಡೋದೇ ಕಷ್ಟವಾಯಿತು.ನಂತರ ಏನಾದರೊಂದು ಉದ್ಯಮ ನಡೆಸಬೇಕಲ್ವ ಎಂದು ಯೋಚನೆ ಮಾಡುತ್ತಿರುವಾಗ ಇಡ್ಲಿ ವ್ಯಾಪಾರ ಮಾಡುವ ಬಗ್ಗೆ ಉಪಾಯ ಮೂಡಿತು.ಹೇಗಿದ್ದರೂ ನನ್ನ ಹೆಂಡತಿ ಒಳ್ಳೆಯ ಇಡ್ಲಿಗಳನ್ನು ಮಾಡುತ್ತಾಳೆ. ಇದರಿಂದ ಇದೀಗ ನಾನು 50-100 ರೂಪಾಯಿ ಲಾಭ ಗಳಿಸುತ್ತೇನೆ. ಈ ಹಣದಿಂದ ಹೇಗೋ ಸ್ವಲ್ಪ ಮಟ್ಟಿಗೆ ಜೀವನ ಸಾಗುತ್ತಿದೆ ಎಂದು ಅವರು ಹೇಳಿದರು.ಈ ಪರಿಸ್ಥಿತಿ ಕೇವಲದೀಪಕ್ ಉಪ್ರರಾರಿಯಗೆ ಮಾತ್ರವಲ್ಲ. ಅವರಂತೆಯೇ, ಎಚ್ಇಸಿಯಲ್ಲಿ ಕೆಲಸ ಮಾಡಿದ ಅನೇಕರು ಈ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
https://twitter.com/Cow__Momma/status/1703453373310042379/photo/2