ನ್ಯೂಸ್ ನಾಟೌಟ್: ಕೇರಳದಲ್ಲಿ ಪತ್ತೆಯಾದ ನಿಫಾ ವೈರಸ್ ಮಾದರಿಯ ಬಗ್ಗೆ ಆಘಾತಕಾರಿ ವಿಷಯವೊಂದು ಹೊರಬಿದ್ದಿದೆ. ಈ ವೈರಸ್ ಬಾಂಗ್ಲಾದೇಶದಲ್ಲಿ ಕಂಡುಬಂದ ರೂಪಾಂತರಿ ತಳಿಯಾಗಿದ್ದು, ಇದು ಮನುಷ್ಯರಿಂದ ಮನುಷ್ಯರಿಗೆ ಹರಡುತ್ತದೆ. ಕಡಿಮೆ ಸಾಂಕ್ರಾಮಿಕವಾಗಿದ್ದರೂ ಹೆಚ್ಚಿನ ಮರಣ ಪ್ರಮಾಣವನ್ನು ಹೊಂದಿದೆ ಎಂದು ತಿಳಿದುಬಂದಿದೆ. ಈ ವಿಚಾರವನ್ನು ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ಕೇರಳ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.
ಕೇರಳದ ಕೋಯಿಕ್ಕೋಡ್ ಜಿಲ್ಲೆಯ ನಾಲ್ವರಲ್ಲಿ ನಿಫಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಪುಣೆಯ ರಾಷ್ಟ್ರೀಯ ವೈರಾಣು ಸಂಸ್ಥೆಯ ತಂಡಗಳು ಕೇರಳಕ್ಕೆ ಆಗಮಿಸಿವೆ. ಪುಣೆಯ ಎನ್ಐವಿ ತಂಡಗಳಲ್ಲದೆ, ಸಾಂಕ್ರಾಮಿಕ ರೋಗಶಾಸ್ತ್ರಜ್ಞರ ಗುಂಪು ಚೆನ್ನೈನಿಂದ ಕೇರಳಕ್ಕೆ ಬಂದು ಸಮೀಕ್ಷೆ ನಡೆಸಲಿದೆ. ಕೋಯಿಕ್ಕೋಡ್ ವೈದ್ಯಕೀಯ ಕಾಲೇಜಿನಲ್ಲಿ ನಿಫಾ ಪರೀಕ್ಷೆ ಮತ್ತು ಬಾವಲಿಗಳ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಲ್ಯಾಬ್ ಸ್ಥಾಪಿಸಲಾಗುವುದು ಎಂದು ಕೇರಳ ಸರ್ಕಾರ ಬುಧವಾರ ಅಲ್ಲಿನ ವಿಧಾನಸಭೆಗೆ ತಿಳಿಸಿದೆ. ಕೋಯಿಕ್ಕೋಡ್ ಜಿಲ್ಲೆಯ ನಾಲ್ವರಲ್ಲಿ ನಿಫಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವೆ ಜಾರ್ಜ್ ತಿಳಿಸಿದ್ದಾರೆ.
ಮೆದುಳಿಗೆ ಹಾನಿ ಮಾಡುವ ನಿಪಾ ವೈರಸ್ ಸೋಂಕಿತರ ಕಣ್ಗಾವಲು, ಸೋಂಕಿತರ ಸಂಪರ್ಕ ಪತ್ತೆಹಚ್ಚುವಿಕೆ, ಹರಡುವಿಕೆ ತಗ್ಗಿಸಲು ಅಪಾಯದ ಸ್ಥಳಗಳನ್ನು ಗುರುತಿಸುವುದು, ಸೋಂಕಿತರನ್ನು ಪ್ರತ್ಯೇಕವಾಗಿ ಇರಿಸುವುದು, ಕಂಟೈನ್ಮೆಂಟ್ ವಲಯಗಳನ್ನು ಗುರುತಿಸುವುದು ಮತ್ತು ಸೋಂಕಿತರಿಗೆ ಐಸಿಎಂಆರ್ನಿಂದ ಔಷಧಿಗಳನ್ನು ಖರೀದಿಸುವುದು ಸೇರಿದಂತೆ ವೈರಸ್ ತಡೆಗೆ ಆರೋಗ್ಯ ಇಲಾಖೆಯು ಹಲವಾರು ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಜಾರ್ಜ್ ತಿಳಿಸಿದರು.