ನ್ಯೂಸ್ ನಾಟೌಟ್: ಕ್ಷುಲ್ಲಕ ಕಾರಣಕ್ಕೆ ಜಗಳಕ್ಕಿಳಿದ ಸಹೋದ್ಯೋಗಿಗಳು ವ್ಯಕ್ತಿಯನ್ನು ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟ ಘಟನೆ ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಮಡಿಕೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಗೌಳಿಬೀದಿ ನಿವಾಸಿಯಾದ ನಿಜಾಮುದ್ದೀನ್ ಪಿಂಟ ವ್ಯಕ್ತಿಯು ಬಾವಿ ಕೆಲಸ ಮಾಡಿಕೊಂಡಿದ್ದು, ಸೆ.15 ರಂದು ಬೆಳಿಗ್ಗೆ ಸುಮಾರು 07.30ಕ್ಕೆ ವಿದ್ಯಾನಗರದಲ್ಲಿರುವ ರಾಶಿದ್ ಮನೆಯಲ್ಲಿ ಸ್ಯಾನಿಟರಿ ಗುಂಡಿ ಕೆಲಸ ಇರುವುದಾಗಿ ಹೇಳಿ ಮನೆಯಿಂದ ತೆರಳಿದ್ದು, ಸ್ಯಾನಿಟರಿ ಗುಂಡಿ ಕೆಲಸ ಮಾಡಲು ನೋಡುತ್ತಿರುವ ಸಂದರ್ಭ ಆಕಸ್ಮಿಕವಾಗಿ ನಿಜಾಮುದ್ದೀನ್ ಕೈ ರಾಶಿದ್ ರವರ ಪತ್ನಿಗೆ ತಗುಲಿದ ವಿಚಾರದಲ್ಲಿ ರಾಶಿದ್ ಹಾಗೂ ಇತರರು ಸೇರಿಕೊಂಡು ಹ* ಲ್ಲೆ ನಡೆಸಿರುವುದಾಗಿ ನಿಜಾಮುದ್ದೀನ್ ರವರು ವಾಪಾಸ್ಸು ಮನೆಗೆ ಬಂದು ತಿಳಿಸಿದ್ದಾರೆ ಎನ್ನಲಾಗಿದೆ.
ಈ ಘಟನೆಯ ಬಳಿಕ ನಿಜಾಮುದ್ದೀನ್ರವರನ್ನು ಅಪಹರಿಸಿ ನಿಜಾಮುದ್ದೀನ್ ಪತ್ನಿಗೆ ವಾಟ್ಸಾಪ್ ಕರೆ ಮಾಡಿ ಫೋನ್ ಪೇ ಮೂಲಕ 5 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದು, ಹಣ ನೀಡದಿದ್ದಲ್ಲಿ ಕೊ* ಲೆ ಮಾಡುವುದಾಗಿ ಬೆದರಿಕೆವೊಡ್ಡಿದ್ದಾರೆ ಎಂದು ಆರೋಪಿಸಲಾಗಿದೆ.
ಸ್ವಲ್ಪ ಸಮಯದ ನಂತರ ಹ* ಲ್ಲೆ ಮಾಡುತ್ತಿರುವ ವಿಡಿಯೋ ತುಣುಕನ್ನು ಕಳುಹಿಸಿದ್ದು ಹಾಗೂ ವಾಟ್ಸಾಪ್ ವಿಡಿಯೋ ಕರೆ ಮಾಡಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
ಆರೋಪಿಯನ್ನು ಪತ್ತೆ ಹಚ್ಚಲು ಆರ್.ವಿ.ಗಂಗಾಧರಪ್ಪ, ಡಿಎಸ್ಪಿ, ಸೋಮವಾರಪೇಟೆ ಉಪವಿಭಾಗ, ಅನೂಪ್ ಮಾದಪ್ಪ, ಸಿಪಿಐ, ಮಡಿಕೇರಿ ನಗರ ವೃತ್ತ ಮತ್ತು ಶ್ರೀನಿವಾಸ್, ಪಿಎಸ್ಐ, ಮಡಿಕೇರಿ ನಗರ ಪೊಲೀಸ್ ಠಾಣೆ ಹಾಗೂ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಸೆ.15 ರಂದು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.
ಆರೋಪಿಗಳನ್ನು ಎಂ.ಝಡ್, ಮಹಮ್ಮದ್ ರಾಶಿದ್ (41), ಪ್ರಮೋದ್ ಎಂ.ಜಿ (31), ಡಾಲಿ ಬಿ(18), ದರ್ಶನ್.ಟಿ.ಆರ್. (18), ಜೀವನ್ ಕುಮಾರ್(25), ಮದನ್ ರಾಜ್, ಟಿ.ಪಿ(34) ದರ್ಶನ್.ಎಸ್(24), ಪುರುಷೋತ್ತಮ್.ಎಂ.ಜೆ(22), ಮಣಿಕಂಠ.ಎಂ.ಆರ್(24), ಕಿರಣ್ ರೈ.ಎನ್.ಎಸ್(32), ಮಂಜು.ಪಿ.ಎಸ್(23), ಕೀರ್ತಿ.ಟಿ.ಎಸ್ (31), ಸಂದೀಪ್.ಎಸ್(37) ಮತ್ತು ತಬಸ(36) ಎಂದು ಗುರುತಿಸಲಾಗಿದೆ.
ಆರೋಪಿಗಳು ಅಪರಾಧ ಕೃತ್ಯಕ್ಕೆ ಬಳಸಿದ ಮೊಬೈಲ್ ಫೋನ್ಗಳು, 02-ನಾಲ್ಕು ಚಕ್ರ, 1-ಆಟೋರಿಕ್ಷಾ,03-ದ್ವಿಚಕ್ರ ವಾಹನಗಳು ಹಾಗೂ 11-ಎಸ್ಬಿಬಿಎಲ್, 11-ಏರ್ ಪಿಸ್ತೂಲ್, 01 ಟಾಯ್ ಪಿಸ್ತೂಲ್, 12 ಕತ್ತಿಗಳನ್ನು ವಶಪಡಿಸಿಕೊಂಡು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಕೊಡಗು ಜಿಲ್ಲೆ, ಮಡಿಕೇರಿ ಪೊಲೀಸ್ ಅಧೀಕ್ಷಕರಾಗಿರುವ ಶ್ರೀ ಕೆ. ರಾಮರಾಜನ್ ಐಪಿಎಸ್ ಶ್ಲಾಘಿಸಿದ್ದಾರೆ.