ನ್ಯೂಸ್ ನಾಟೌಟ್: ಕೊಡಗಿನಲ್ಲಿ ಕಾಡಾನೆಗಳ ದಾಳಿ ತೀವ್ರವಾಗುತ್ತಿರುವ ಬೆನ್ನಲ್ಲೇ ಇದೀಗ ಆನೆ ದಾಳಿಗೆ ಅರಣ್ಯ ಸಿಬ್ಬಂದಿಯೊಬ್ಬರು ಬಲಿಯಾಗಿರುವ ದಾರುಣ ಘಟನೆ ಮಡಿಕೇರಿ ಬಳಿಯ ಕೆದಕಲ್ ನಲ್ಲಿ ನಡೆದಿದೆ.
ಇತ್ತೀಚೆಗೆ ಹಾಸನದಲ್ಲಿ ಗಾಯಾಳು ಆನೆಗೆ ಚಿಕಿತ್ಸೆ ಕೊಡಿಸಲು ಪ್ರಯತ್ನಿಸುತ್ತಿರುವ ಸಂದರ್ಭದಲ್ಲಿ ರೊಚ್ಚಿಗೆದ್ದ ಆನೆ ಸಿಬ್ಬಂದಿಯೊಬ್ಬರನ್ನು ಮೆಟ್ಟಿ ಕೊಂದು ಹಾಕಿತ್ತು. ಈ ಘಟನೆ ಇನ್ನೂ ಕಣ್ಣೆದುರಲ್ಲೇ ಇರುವಾಗ ಮತ್ತೊಬ್ಬರು ಸಿಬ್ಬಂದಿಯೂ ಆನೆ ದಾಳಿಗೆ ಮೃತಪಟ್ಟಿರುವುದು ದುರಾದೃಷ್ಟಕರ.
ಶುಂಠಿಕೊಪ್ಪದಲ್ಲಿ ಇಂದು ಬೆಳಗ್ಗೆ ಕಾಡಾನೆ ದಾಳಿ ನಡೆಸಿತ್ತು. ಬೈಕ್ ನಿಂದು ಬಿದ್ದು ವ್ಯಕ್ತಿಗೆ ಗಾಯವಾಗಿತ್ತು. ಇವರನ್ನು ಆಸ್ಪತ್ರೆಗೆ ಸಾಗಿಸುವ ಸಮಯದಲ್ಲಿ ಅದೇ ಕಾಡಾನೆಯೂ ಮತ್ತೊಬ್ಬನ ಮೇಲೆಯೂ ಎರಗಿದೆ. ಈ ಹಿನ್ನೆಲೆಯಲ್ಲಿ ಆನೆಯನ್ನು ಓಡಿಸುವ ಸಲುವಾಗಿ ಬೆಳಗ್ಗಿನಿಂದಲೇ ಅರಣ್ಯ ಇಲಾಖೆ ಸಹಯೋಗದಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು.
ಈ ತಂಡದಲ್ಲಿ ಆರ್ಆರ್ ಟಿ ಸಿಬ್ಬಂದಿ ಗಿರೀಶ್(35) ಕೂಡ ಇದ್ದರು. ಆನೆಯನ್ನು ಕಾಡಿಗಟ್ಟುವ ಸಂದರ್ಭದಲ್ಲಿ ಅವಘಡ ಸಂಭವಿಸಿದೆ. ಈ ವೇಳೆ ಕಾಡಾನೆ ಗಿರೀಶ್ ಅವರ ಮೇಲೆ ಎರಗಿದೆ. ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ್ ಅವರನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು.
ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ ಎಂದು ತಿಳಿದು ಬಂದಿದೆ. ಗಂಭೀರವಾಗಿ ಗಾಯಗೊಂಡಿದ್ದ ಗಿರೀಶ ಕಳೆದ ಹಲವು ವರ್ಷಗಳಿಂದ ಆನೆಕಾಡು ಆರ್ ಆರ್ ಟಿ ತಂಡದಲ್ಲಿ ಕಾರ್ಯನಿರ್ವಹಿಸುತ್ತಿದ್ದರು.