ನ್ಯೂಸ್ ನಾಟೌಟ್ : ಕೊಡಗಿನಲ್ಲಿ ಒಂದು ಗಾಜಿನ ಸೇತುವೆ ಆಯ್ತು. ಹೆಚ್ಚಿನವರೆಲ್ಲರೂ ಅದನ್ನು ಕಣ್ತುಂಬಿಕೊಂಡರು. ಈ ನಡುವೆಯೇ ಭಾರತದ ಅತೀ ಉದ್ದದ ಗಾಜಿನ ಸೇತುವೆಯೊಂದನ್ನು ನಿರ್ಮಿಸಲಾಗಿದೆ. ವಿಶೇಷವೆಂದರೆ ಇದು ದೇಶದಲ್ಲೇ ಅತ್ಯಂತ ಉದ್ದದ ಗಾಜಿನ (longest glass bridge of India) ಸೇತುವೆ ಎನಿಸಿಕೊಂಡಿದೆ. ಅಂದ ಹಾಗೆ ಇದು ಇರುವುದು ನೆರೆಯ ಕೇರಳದಲ್ಲಿ. ಇದೀಗ ಹೆಚ್ಚಿನ ಜನರು ವಾರಾಂತ್ಯದಲ್ಲಿ ಈ ಗಾಜಿನ ಸೇತುವೆ ನೋಡುವುದಕ್ಕೆ ಕೇರಳದ ಇಡುಕ್ಕಿ ಬಳಿ ತೆರಳುತ್ತಿದ್ದಾರೆ. ಕೇರಳದ ಪ್ರವಾಸೋದ್ಯಮ ಸಚಿವ ಪಿ ಎ ಮೊಹಮ್ಮದ್ ರಿಯಾಸ್ ಕಳೆದ ವಾರ ಇದನ್ನು ಉದ್ಘಾಟಿಸಿದ್ದಾರೆ.
ಈ ಗಾಜಿನ ಸೇತುವೆಯ ಕೆಳಗೆ ಅಕ್ಷರಶಃ ಪ್ರಪಾತವೇ ಕಾಣುತ್ತದೆ. ಸಮುದ್ರ ಮಟ್ಟದಿಂದ 3,600 ಅಡಿ ಎತ್ತರದ ವಾಗಮಾನ್ ಬೆಟ್ಟಗಳ ಮೇಲೆ ಇದು ನೆಲೆಗೊಂಡಿದೆ. ಗಾಜಿನ ಸೇತುವೆಯು 40 ಮೀ (120 ಅಡಿ) ಉದ್ದವನ್ನು ಹೊಂದಿದೆ. ಗಾಜಿನ ಸೇತುವೆ ಮೇಲೆ ನಡೆಯುತ್ತಾ ಆಕಾಶದಲ್ಲೇ ಹೋದಂತೆ ಫೀಲ್ ಕೊಡುತ್ತದೆ. ಸೇತುವೆಯ ಕೊನೆಯಲ್ಲಿ ನೀವು ಹಸಿರು ಹೊದ್ದಿರುವ ಬೆಟ್ಟಗಳು ಮತ್ತು ಕಣಿವೆಗಳ ಅದ್ಭುತ ನೋಟವನ್ನು, ಕೂಟ್ಟಿಕ್ಕಲ್ ಮತ್ತು ಕೊಕ್ಕಯಾರ್ ಪಟ್ಟಣಗಳ ದೂರದ ನೋಟವನ್ನು ಪಡೆಯಬಹುದಾಗಿದೆ.
ಸೇತುವೆಯನ್ನು ಉಕ್ಕಿನ ಕೇಬಲ್ಗಳು ಮತ್ತು ಬೃಹತ್ ಕಾಂಕ್ರೀಟ್ ಕಂಬದ ರಚನೆಯಿಂದ ಹಿಡಿದಿಟ್ಟುಕೊಳ್ಳಲಾಗಿದೆ. ಒಮ್ಮೆಗೆ 15 ವ್ಯಕ್ತಿಗಳು ಈ ಗಾಜಿನ ಸೇತುವೆಯ ಮೇಲೆ ನಡೆಯಬಹುದು. ವಾಗಮೋನ್ ಗಿರಿಧಾಮದ ಸೌಂದರ್ಯದ ವಿಹಂಗಮ ನೋಟವನ್ನು ವೀಕ್ಷಿಸಬಹುದು. DTPC ಅಧಿಕಾರಿಗಳ ಪ್ರಕಾರ, ಜರ್ಮನಿಯಿಂದ ಆಮದು ಮಾಡಿಕೊಳ್ಳಲಾದ ಒಟ್ಟು 35 ಟನ್ ಉಕ್ಕನ್ನು ಸೇತುವೆಯ ನಿರ್ಮಾಣಕ್ಕೆ ಬಳಸಲಾಗಿದೆ.
ಜಿಲ್ಲಾ ಪ್ರವಾಸೋದ್ಯಮ ಉತ್ತೇಜನಾ ಮಂಡಳಿಯು ಭಾರತ್ ಮಾತಾ ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ಸಹಯೋಗದೊಂದಿಗೆ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಮಾದರಿಯಲ್ಲಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಯೋಜನೆಯನ್ನು ಪ್ರಾರಂಭಿಸಿದೆ. ಸ್ಕೈ ಸ್ವಿಂಗ್, ಸ್ಕೈ ಸೈಕ್ಲಿಂಗ್, ಸ್ಕೈ ರೋಲರ್ ಮತ್ತು ರಾಕೆಟ್ ಇಂಜೆಕ್ಟರ್, ಜೈಂಟ್ ಸ್ವಿಂಗ್, ಜಿಪ್ ಲೈನ್ ಸೇರಿದಂತೆ ಪ್ರವಾಸಿಗರಿಗೆ ಹಲವು ಸಾಹಸ ಚಟುವಟಿಕೆಗಳು ಇರುವ ಪ್ರವಾಸೋದ್ಯಮ ಉದ್ಯಾನವನವೇ ಇಲ್ಲಿದೆ. ಇದರಿಂದ ವಾಗಮಾನ್ ನ ಪ್ರವಾಸೋದ್ಯಮ ಭವಿಷ್ಯ ಸುಧಾರಿಸಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳು ಹೇಳಿದ್ದಾರೆ.