ನ್ಯೂಸ್ ನಾಟೌಟ್ : ಕರ್ನಾಟಕ ವಿಧಾನಸಭೆಯಲ್ಲಿ ವಿಜಯ ಸಾಧಿಸಿದ ಕಾಂಗ್ರೆಸ್ ಲೋಕಸಭೆಯಲ್ಲೂ (Loksabha Elections 2024) ಗೆಲುವು ಬಾರಿಸುವ ಹುಮ್ಮಸ್ಸಿನಲ್ಲಿ ಕಾಂಗ್ರೆಸ್ ಇರುವಾಗ ಇತ್ತ ಬಿಜೆಪಿ ಮತ್ತು ಜೆಡಿಎಸ್ ರಾಜಕೀಯ ಕಸರತ್ತಿನಲ್ಲಿ ತೊಡಗಿವೆ.
ಬಿಜೆಪಿ ಹಾಲಿ ಶಾಸಕರು, ಸೋತಿರುವ ಪ್ರಭಾವಿ ಮಾಜಿ ಶಾಸಕರು, ಬಿಜೆಪಿ, ಜೆಡಿಎಸ್ನ ಪ್ರಭಾವಿ ಮುಖಂಡರಿಗೆ ಕಾಂಗ್ರೆಸ್ ಆಪರೇಷನ್ ಮಾಡುತ್ತದೆ ಎಂಬ ಸುದ್ದಿ ಎಲ್ಲೆಡೆ ಜೋರಾಗಿಯೇ ಸದ್ದು ಮಾಡಿತ್ತು. ಮತ್ತೊಂದೆಡೆ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಒಟ್ಟಿಗೆ ಲೋಕಸಭಾ ಚುನಾವಣೆ ಅಖಾಡಕ್ಕಿಳಿಯಲು ಮುಂದಾಗಿರುವುದು ಈಗ ಭಾರೀ ಕುತೂಹಲಕ್ಕೆ ಕಾರಣವಾಗಿವೆ.
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ಎನ್ನಲಾಗಿದೆ. ಈ ನಾಯಕರ ನಡುವಿನ ಮಾತುಕತೆ ಯಶಸ್ವಿಯಾಗಿದ್ದು, ಮೈತ್ರಿ ಮಾಡಿಕೊಳ್ಳುವುದು ಖಚಿತ ಎನ್ನಲಾಗುತ್ತಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅನುಮತಿಯೊಂದು ಒಂದೇ ಒಂದು ಅನುಮತಿ ನೀಡುವುದೊಂದೇ ಬಾಕಿ ಇದೆ ಎಂದು ಹೇಳಲಾಗಿದೆ.
ದೇವೇಗೌಡ ಅವರು ಬಿಜೆಪಿ ನಾಯಕರೊಂದಿಗೆ ನಡೆಸಿದ್ದ ಮಾತುಕತೆ ಯಶಸ್ವಿಯಾಗಿದ್ದಲ್ಲದೇ ಕ್ಷೇತ್ರ ಹಂಚಿಕೆ ಬಗ್ಗೆ ಒಪ್ಪಂದ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಮೂಲಗಳ ಪ್ರಕಾರ ದೇವೇಗೌಡ ಅವರು ಐದು ಲೋಕಸಭಾ ಕ್ಷೇತ್ರಗಳನ್ನು ತಮಗೆ ಬಿಟ್ಟುಕೊಡುವಂತೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.