ನ್ಯೂಸ್ ನಾಟೌಟ್ : ಶವ ಪರೀಕ್ಷೆ ನಡೆಸುವುದಕ್ಕೆ ಮೃತನ ಸಂಬಂಧಿಕನ ಕಡೆಯವರಿಂದ ಹಣ ಪೀಕಿದ ವೈದ್ಯನನ್ನು ಅಮಾನತು ಮಾಡುವಂತೆ ವಿರಾಜಪೇಟೆ ಶಾಸಕ ಹಾಗೂ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಆದೇಶ ನೀಡಿದ್ದಾರೆ.
ವಿರಾಜಪೇಟೆ ತಾಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಶವ ಪರೀಕ್ಷೆ ನಡೆಸುವುದಕ್ಕೆ ಶುಕ್ರವಾರ ವೈದ್ಯರೊಬ್ಬರು ನಿರಾಕರಿಸಿದರು. ಈಗ ರಾತ್ರಿ ಆಗಿದೆ, ಶವ ಪರೀಕ್ಷೆ ನಡೆಸುವುದಕ್ಕೆ ಆಗುವುದಿಲ್ಲ, 2 ಸಾವಿರ ರೂ. ಕೊಟ್ಟರಷ್ಟೇ ಶವ ಪರೀಕ್ಷೆ ನಡೆಸಿಕೊಡುತ್ತೇನೆ. ನನಗೆ ಮಾತ್ರವಲ್ಲ ನಮ್ಮ ಇತರೆ ಸಿಬ್ಬಂದಿಗೂ 500 ರೂ. ಹಣ ನೀಡಬೇಕು ಎಂದು ಹೇಳಿದ್ದರು. ಈ ಬಗೆಗಿನ ವಿಡಿಯೋವೊಂದು ನ್ಯೂಸ್ ನಾಟೌಟ್ ನಲ್ಲಿ ಪ್ರಕಟಿಸಲಾಗಿತ್ತು. ಈ ಬೆನ್ನಲ್ಲೇ ತುರ್ತಾಗಿ ಸ್ಪಂದಿಸಿದ ಶಾಸಕರು ವೈದ್ಯನ ಅಮಾನತು ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಯಾರೇ ಆಗಿರಲಿ ಬಡವರ ಕೈಯಿಂದ ಹಣ ದೋಚಿದರೆ ಅವರ ಮೇಲೆ ಸೂಕ್ತ ಕಾನೂನು ಜರುಗಿಸಲಾಗುವುದು ಎಂದು ಪೊನ್ನಣ್ಣ ಇದೇ ವೇಳೆ ಎಚ್ಚರಿಸಿದ್ದಾರೆ.