ನ್ಯೂಸ್ ನಾಟೌಟ್: ಕೇರಳ ರಾಜ್ಯದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಇಬ್ಬರು ನಿಫಾ ವೈರಾಣುವಿನ ಜ್ವರದಿಂದ ದುರಂತ ಅಂತ್ಯಕ್ಕೀಡಾಗಿದ್ದು ಖಚಿತವಾಗುತ್ತಿದ್ದಂತೆ ಕೇರಳ ಗಡಿಭಾಗವನ್ನು ಹೊಂದಿಕೊಂಡಂತೆ ಇರುವ ಕೊಡಗು ಜಿಲ್ಲೆಯಲ್ಲೂ ಆರೋಗ್ಯ ಇಲಾಖೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾರಂಭಿಸಿದೆ.
ಜಿಲ್ಲೆಯಲ್ಲಿ ಸೋಂಕಿತರು ಪತ್ತೆಯಾದರೆ ಅವರಿಗೆ ವಿಶೇಷವಾಗಿ ವ್ಯವಸ್ಥೆ ಮಾಡಲಾಗುತ್ತದೆ.ಪ್ರತ್ಯೇಕವಾಗಿ ಚಿಕಿತ್ಸೆ ನೀಡಲು ಜಿಲ್ಲಾಸ್ಪತ್ರೆ ಹಾಗೂ ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ವಿಶೇಷ ವಾರ್ಡ್ ತೆರೆಯಲು ಸಿದ್ಧತೆಗಳನ್ನು ಕೈಗೊಂಡಿದೆ.
ಕೇರಳ ರಾಜ್ಯಕ್ಕೆ ಹೊಂದಿಕೊಂಡು ಇರುವ ಕೊಡಗು ಜಿಲ್ಲೆಯಲ್ಲೂ ನಿಫಾ ವೈರಸ್ ಹರಡುವ ಭೀತಿ ಎದುರಾಗಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯ ಅರೋಗ್ಯ ಇಲಾಖೆಯ ಸಿಬ್ಬಂದಿ,ಅಧಿಕಾರಿಗಳು ಹೈ ಅಲರ್ಟ್ ಆಗಿದ್ದಾರೆ.
ಜಿಲ್ಲೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ನಿಫಾ ವೈರಸ್ ಸೋಂಕನ್ನು ಹೋಲುವ ಯಾವುದಾದರೂ ಪ್ರಕರಣ ಕಂಡು ಬಂದರೂ ಕೂಡಲೇ ಗಮನಕ್ಕೆ ತರುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ ಸತೀಶ್ಕುಮಾರ್ ಮನವಿ ಮಾಡಿದ್ದಾರೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಜ್ವರಪೀಡಿತರ ಸಮೀಕ್ಷೆ ನಡೆಸಲು ನಿರ್ಧರಿಸಲಾಗಿದ್ದು, ಜ್ವರಪೀಡಿತರ ಮೇಲೆ ವಿಶೇಷ ನಿಗಾ ವಹಿಸಲು ಆರೋಗ್ಯ ಇಲಾಖೆಯ ಕಾರ್ಯಕರ್ತರಿಗೆ ಸೂಚಿಸಲಾಗಿದೆ.
ಈಗಾಗಲೇ ಜಿಲ್ಲಾ ಅಸ್ಪತ್ರೆ ಹಾಗೂ ಜಿಲ್ಲೆಯ ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಪ್ರತ್ಯೇಕವಾದ ವಾರ್ಡ್ , ತುರ್ತಾಗಿ ಏಳು ಬೆಡ್ಗಳ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗಿದೆ. ಹವಾಮಾನ ವೈಪರೀತ್ಯಗಳಿಂದ ಕೊಡಗು ಜಿಲ್ಲೆಯಲ್ಲಿ ಈಗಾಗಲೇ ದಿನವೊಂದಕ್ಕೆ ಸುಮಾರು 150 ರಿಂದ 200 ಜನರು ಫೀವರ್ ನಿಂದ ಬಳಲುತ್ತಿದ್ದು, ಇದೀಗ ನಿಫಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಅತ್ಯಂತ ತೀವ್ರವಾಗಿ ಜ್ವರದಿಂದ ಬಳಲುತ್ತಿರುವ ರೋಗಿಗಳ ಮೇಲೆಯೂ ನಿಗಾ ವಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಕೇರಳ ರಾಜ್ಯದಿಂದ ಬರುವ ವ್ಯಕ್ತಿಗಳ ಮೇಲೆಯೂ ಸೂಕ್ಷ್ಮವಾಗಿ ನಿಗಾ ಇರಿಸಲಾಗಿದ್ದು, ಕೇರಳದಿಂದ ಬಂದಿರುವ ವ್ಯಕ್ತಿಗಳ ಟ್ರಾವೆಲ್ ಹಿಸ್ಟರಿಯನ್ನು ಪರಿಶೀಲನೆ ಮಾಡಲು ಅರೋಗ್ಯ ಇಲಾಖೆ ಮುಂದಾಗಿದೆ.ಒಟ್ಟಿನಲ್ಲಿ ಪಕ್ಕದ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಜಿಲ್ಲಾಡಳಿತ ಹಾಗೂ ಅರೋಗ್ಯ ಇಲಾಖೆ ಕಟ್ಟುನಿಟ್ಟಾಗಿ ಕ್ರಮ ಕೈಗೊಂಡಿದ್ದು, ಗಡಿಭಾಗದಲ್ಲಿ ಹೈ ಅಲರ್ಟ್ ಮಾಡಲಾಗಿದೆ. ಅಂತರ್ ರಾಜ್ಯದ ಚೆಕ್ ಪೋಸ್ಟ್ ಗಳಿಂದ ಬರುವ ಕೇರಳದವರ ಮೇಲೆಯೂ ನಿಗಾ ವಹಿಸಿದೆ.