ನ್ಯೂಸ್ ನಾಟೌಟ್ : ಕೊಡಗು ಜಿಲ್ಲೆಯ ಮುಂದಿನ ಜಿಲ್ಲಾ ಪಂಚಾಯತ್ ಚುನಾವಣೆಗೆ ಒಟ್ಟು 29 ಚುನಾವಣಾ ಕ್ಷೇತ್ರಗಳ ಪೈಕಿ 4 ಕ್ಷೇತ್ರಗಳನ್ನು ಕೈ ಬಿಟ್ಟಿದ್ದು ಅದನ್ನು ಮರುಪರಿಶೀಲಿಸಿ ಆ 29 ಕ್ಷೇತ್ರಗಳಿಗೂ ಚುನಾವಣೆ ನಡೆಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಕಾಂಗ್ರೆಸ್ನ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು.
ಅಭಿವೃದ್ಧಿಯ ವಿಷಯದಲ್ಲಿ ಕೊಡಗು ಜಿಲ್ಲೆಯು ಹಿಂದುಳಿದಿದ್ದು, ಸರ್ಕಾರ ಈ ಬಗ್ಗೆ ಸ್ಪಂದಿಸಬೇಕು. ಅಲ್ಲದೇ ಕೊಡಗು ಜಿಲ್ಲೆಯ ಅಭಿವೃದ್ಧಿಗೆ ವಿಶೇಷ ಅನುದಾನ ನೀಡಲು ಮತ್ತು ಮಳೆ ಕೊರತೆ ಹಿನ್ನೆಲೆ ಸರ್ಕಾರ ಘೋಷಣೆ ಮಾಡಿರುವ ಬರಪೀಡಿತ ಪ್ರದೇಶಗಳಿಗೆ ಹೆಚ್ಚಿನ ಅನುದಾನ ನೀಡಬೇಕೆಂದು ಮುಖ್ಯಮಂತ್ರಿ ಜತೆ ಚರ್ಚಿಸಲಾಯಿತು. ಈ ಸಂದರ್ಭ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎನ್.ಬೋಸರಾಜ್, ವಿರಾಜಪೇಟೆ ಕ್ಷೇತ್ರದ ಶಾಸಕ ಮತ್ತು ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಎ.ಎಸ್ ಪೊನ್ನಣ್ಣ, ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ, ಜಿಲ್ಲಾ ಕಾಂಗ್ರೆಸ್ನ ಅಧ್ಯಕ್ಷರು, ಪದಾಧಿಕಾರಿಗಳು ಮತ್ತು ಸದಸ್ಯರು, ಕೆಪಿಸಿಸಿಯ ಪ್ರಮುಖರು ಮತ್ತು ಸದಸ್ಯರು, ಜಿಲ್ಲಾ ಪಂಚಾಯತ್ನ ಮಾಜಿ ಸದಸ್ಯರು ಹಾಗೂ ಬ್ಲಾಕ್ ಕಾಂಗ್ರೆಸ್ನ ಪದಾಧಿಕಾರಿಗಳು ಉಪಸ್ಥಿತರಿದ್ದರು.