ನ್ಯೂಸ್ ನಾಟೌಟ್ : ಎಷ್ಟು ಗಟ್ಟಿ ಮನಸ್ಸಿನವರಾದರೂ ಒಮ್ಮೆ ಬೆಚ್ಚಿಬೀಳುವಂಥ ಎರಡು ಪ್ರಕರಣಗಳು ಇಂದು ರಾಜ್ಯದಲ್ಲಿ ನಡೆದಿವೆ. ಈ ಎರಡೂ ಪ್ರಕರಣಗಳಿಗೆ ಸರ್ಪವೇ ಕಾರಣವಾಗಿದೆ.
ಇಂದು ಬೆಳಗ್ಗಿನಿಂದಲೇ ವೈರಲ್ ಆದ ಸುದ್ದಿಯೇನಂದ್ರೆ ಶಾಲಾ ಮಗುವೊಂದರ ಬ್ಯಾಗ್ನಲ್ಲಿ ಹಾವು ಪ್ರತ್ಯಕ್ಷವಾಗಿದ್ದು,ಶಿವಮೊಗ್ಗದಲ್ಲಿ ನಡೆದ ಈ ಘಟನೆಗೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದ್ದು.ಶಾಲಾ ಬ್ಯಾಗ್ಗಳಿಗೆ ಹಾವು ಹೋಗಿ ಸೇರಿಕೊಳ್ಳೋದಕ್ಕೆ ಹೇಗೆ ಸಾಧ್ಯ ಎಂಬುದರ ಬಗ್ಗೆ ತಲೆಕೆಡಿಸುವ ಈ ಸಂದರ್ಭದಲ್ಲೇ ಮತ್ತೊಂದು ಇಂತಹದ್ದೇ ಘಟನೆ ಮಡಿಕೇರಿಯಿಂದ ವರದಿಯಾಗಿದೆ.
ಮಡಿಕೇರಿಯ ಇಂದಿರಾನಗರದ ಶಿವಪ್ಪ ಅವರ ಮನೆಯ ದೇವರಕೋಣೆಯಲ್ಲಿ ಇಂದು ಮಧ್ಯಾಹ್ನ ದೊಡ್ಡ ಕಾಳಿಂಗ ಸರ್ಪವೊಂದು ಕಂಡುಬಂದಿದೆ. ಸುಮಾರು 13 ಅಡಿ ಉದ್ದದ ಕಾಳಿಂಗ ಸರ್ಪವನ್ನು ನೋಡಿ ಮನೆಯವರು ಒಮ್ಮೆ ದಂಗಾಗಿದ್ದರು. ಬಳಿಕ ಉರಗ ತಜ್ಞ ಯದುಕುಮಾರ್ ಅವರಿಗೆ ವಿಷಯ ತಿಳಿಸಲಾಗಿದ್ದು, ಅವರು ತಕ್ಷಣ ಧಾವಿಸಿ ಹಾವನ್ನು ಹಿಡಿದು ಮದೆನಾಡಿನ ದೇವರ ಕಾಡಿಗೆ ಬಿಟ್ಟಿದ್ದಾರೆ.
ಇತ್ತ ಶಿವಮೊಗ್ಗದಲ್ಲಿ ನಡೆದ ಪ್ರಕರಣದಲ್ಲಿ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಎರಡನೇ ತರಗತಿ ವಿದ್ಯಾರ್ಥಿ ಭುವನ್ ಎಂಬಾತನ ಶಾಲಾ ಚೀಲದಲ್ಲಿ ನಾಗರಹಾವು ಕಂಡುಬಂದಿದೆ.ಪುಸ್ತಕ ಹೊರ ತೆಗೆಯುವಾಗ ಚೀಲದೊಳಗಿದ್ದ ನಾಗರಹಾವು ಕಾಣಿಸಿದ್ದು, ಆತ ತಕ್ಷಣ ತನ್ನ ಸಹಪಾಠಿ ಮಣಿಕಂಠನಿಗೆ ವಿಷಯ ತಿಳಿಸಿದ್ದಾನೆ.
ಮಣಿಕಂಠ ಕೂಡಲೇ ಬ್ಯಾಗ್ನ ಜಿಪ್ ಹಾಕಿ ಶಿಕ್ಷಕರಿಗೆ ಮಾಹಿತಿ ನೀಡಿದ್ದಾನೆ. ಬ್ಯಾಗ್ ಹೊರತಂದ ಶಿಕ್ಷಕರು, ಪಾಲಕರಿಗೆ ಮಾಹಿತಿ ನೀಡಿದ್ದು, ನಂತರ ಅವರ ಸಹಾಯದಿಂದ ನಾಗರಹಾವನ್ನು ಕಾಡಿಗೆ ಬಿಡಲಾಯಿತು. ವಿದ್ಯಾರ್ಥಿ ಮಣಿಕಂಠನ ಸಮಯಪ್ರಜ್ಞೆಗೆ ಶಿಕ್ಷಕರು, ಪೋಷಕರು ಹಾಗೂ ಇತರ ವಿದ್ಯಾರ್ಥಿಗಳು ಭಾರಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.