ನ್ಯೂಸ್ ನಾಟೌಟ್: ಕೇರಳ ಓಣಂ ಬಂಪರ್ ಲಾಟರಿ 25 ಕೋಟಿ ರೂ. ಭಾರಿ ಮೊತ್ತವನ್ನು ಸುಳ್ಯ ತಾಲೂಕಿನ ಯುವಕನೊಬ್ಬ ಗೆದ್ದಿದ್ದಾನೆ ಅನ್ನುವ ಸುದ್ದಿ ವೈರಲ್ ಆಗಿದೆ. ಈ ನಡುವೆ ಸುಳ್ಳು ಸುದ್ದಿ ಹರಡಿದವರ ವಿರುದ್ಧ ಯುವಕನ ಮನೆಯವರು ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಸುಳ್ಯ ತಾಲೂಕಿನ ಕಲ್ಮಡ್ಕ ಗ್ರಾಮದ ನಿವಾಸಿ ಗೌತಮ್ ಕುಲ್ಸಿ (27 ವರ್ಷ) ಅನ್ನುವವರು ಸ್ವಂತ ಪಿಕಪ್ ಇರಿಸಿಕೊಂಡು ಅದರಲ್ಲಿ ಚಾಲಕರಾಗಿ ದುಡಿಯುತ್ತಿದ್ದಾರೆ. ಕೆಲವು ಕಿಡಿಗೇಡಿಗಳು ಅವರಿಗೆ ಕೇರಳ ಓಣಂ ಬಂಪರ್ ಲಾಟರಿ 25 ಕೋಟಿ ರೂ. ಜಯಿಸಿದ್ದಾರೆಂದು ಸುಳ್ಳು ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿದ್ದಾರೆ. ಇದರಿಂದ ಯುವಕ ಹಾಗೂ ಅವರ ಮನೆಯವರಿಗೆ ತೀವ್ರ ಮಾನಸಿಕ ಕಿರಿಕಿರಿಯಾಗಿದೆ. ಪ್ರತಿಯೊಬ್ಬರು ಕರೆ ಮಾಡುವುದು ವಿಚಾರಿಸುವುದಕ್ಕೆ ಉತ್ತರ ಕೊಡುವುದಕ್ಕೂ ಕಷ್ಟವಾಗಿದೆ. ಇದರಿಂದ ನೊಂದ ಗೌತಮ್ ಅವರು ಇದೀಗ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ದೂರೊಂದನ್ನು ದಾಖಲಿಸಿದ್ದಾರೆ. ತಮ್ಮ ವಿರುದ್ಧ ಅಪಪ್ರಚಾರ ನಡೆಸಿದ ಕಿಡಿಗೇಡಿಗಳನ್ನು ಬಂಧಿಸಿ ಕ್ರಮ ತೆಗೆದುಕೊಳ್ಳಬೇಕೆಂದು ಆಗ್ರಹಿಸಿದ್ದಾರೆ.