ನ್ಯೂಸ್ ನಾಟೌಟ್ : ಕನ್ನಡ ಚಿತ್ರರಂಗದ ಹಿರಿಯ ನಟ ಹಾಗೂ ಹಾಸ್ಯ ನಟರೆಂದೇ ಖ್ಯಾತಿ ಪಡೆದಿರುವ ಬ್ಯಾಂಕ್ ಜನಾರ್ಧನ್ ಅವರಿಗೆ ಹೃದಯಾಘಾತವಾಗಿದೆ ಎಂದು ವರದಿಯಾಗಿದೆ. ಇವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ. ಅವರಿಗೆ ಐಸಿಯುನಲ್ಲಿ ಚಿಕಿತ್ಸೆ ಮುಂದುವರೆದಿದ್ದು, ಆರೋಗ್ಯವಾಗಿದ್ದಾರೆ. ಆಂಜಿಯೋಗ್ರಾಮ್ ಮಾಡಲಾಗುತ್ತಿದೆ ಎಂದು ತಿಳಿದುಬಂದಿದೆ.
ಹಿರಿಯ ನಟರಾದ ವೈಜನಾಥ್ ಬಿರಾದಾರ್ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿ ಜನಾರ್ಧನ್ ಅವರ ಆರೋಗ್ಯ ವಿಚಾರಿಸಿದ್ದಾರೆ. 74 ವರ್ಷದ ಬ್ಯಾಂಕ್ ಜನಾರ್ದನ್ ಅವರು ಕಳೆದ 40 ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದು, ಹಲವು ಚಿತ್ರಗಳಲ್ಲಿ ಹಾಸ್ಯ, ಪೋಷಕ ನಟರಾಗಿ ಅಭಿನಯಿಸುವ ಮೂಲಕ ಎಲ್ಲರಿಗೂ ಚಿರಪರಿಚಿತರು.
ಅವರ ಅಭಿನಯಿಸಿದ ಹಲವು ಚಿತ್ರಗಳಲ್ಲಿ ಅಜಗಜಾಂತರ, ಉಪೇಂದ್ರ ನಿರ್ದೇಶನದ ಶ್, ಜಗ್ಗೇಶ್ ಅಭಿನಯದ ತರ್ಲೆ ನನ್ ಮಗ, ಬೆಳ್ಳಿಯಪ್ಪ ಬಂಗಾರಪ್ಪ ಸೇರಿದಂತೆ ಭಾರಿ ಪ್ರಸಿದ್ಧವಾದವುಗಳು.ಸುಮಾರು 500ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ ಇವರು 2012 ರಲ್ಲಿ ತೆರೆ ಕಂಡ ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಹಾಗೂ ಮೇಘನಾ ಗಾಂವ್ಕರ್ ಅಭಿನಯದ ಸಿನಿಮಾ ತುಗ್ಲಕ್ ಚಿತ್ರದಲ್ಲಿಯೂ ಅಭಿನಯಿಸಿದರು.
ಅದಾದ ಬಳಿಕ ಅಷ್ಟಾಗಿ ಚಿತ್ರಗಳಲ್ಲಿ ಕಾಣಿಸಿಕೊಳ್ಳದ ಬ್ಯಾಂಕ್ ಜನಾರ್ಧನ್ ಸೀರಿಯಲ್ ನಲ್ಲಿ ಕಾಣಿಸಿಕೊಳ್ಳಲಾರಂಭಿಸಿದರು. ಪಾಪ ಪಾಂಡು, ಮಾಂಗಲ್ಯ, ರೋಬೋ ಫ್ಯಾಮಿಲಿ, ಜೋಕಾಲಿ ಮತ್ತಿತರ ಸೀರಿಯಲ್ನಲ್ಲಿ ಬ್ಯಾಂಕ್ ಜನಾರ್ದನ್ ಅಭಿನಯಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ.