ನ್ಯೂಸ್ ನಾಟೌಟ್: ದೇಶದ ಕಾನೂನಿಗಿಂತ ಯಾರೂ ದೊಡ್ಡವರಲ್ಲ. ದೇಶದೊಳಗೆ ಸಂವಿಧಾನವನ್ನು ರಚಿಸಿ ಅದಕ್ಕೊಂದು ಕಾನೂನಿನ ಚೌಕಟ್ಟನ್ನು ರೂಪಿಸಲಾಗಿದೆ. ಮೋಸ, ವಂಚನೆ, ದರೋಡೆ, ಕಳ್ಳತನ ಏನೇ ಆಗಿದ್ದರೂ ಅದನ್ನು ಪೊಲೀಸ್ ಠಾಣೆಯಲ್ಲಿ ದೂರು ನೀಡಿ ಅದಕ್ಕೆ ಪರಿಹಾರ ಕಂಡುಕೊಳ್ಳಬೇಕು. ಅದನ್ನು ಬಿಟ್ಟು ಕಂಡವರ ಮನೆಯಂಗಳಕ್ಕೆ ನುಗ್ಗಿದರೆ ಏನಾಗಬಾರದೋ ಅದೇ ಆಗುತ್ತದೆ ಅನ್ನೋದಕ್ಕೆ ಇಲ್ಲೊಂದು ಘಟನೆ ತಾಜಾ ಉದಾಹರಣೆಯಾಗಿದೆ. ಕಲ್ಲುಗುಂಡಿ ಸಮೀಪದ ಕೈಪಡ್ಕ ಎಂಬಲ್ಲಿನ ರಾಷ್ಟ್ರೀಯ ಹೆದ್ದಾರಿಯಲ್ಲಿ ನಾಪತ್ತೆಯಾದ ವಸ್ತುವನ್ನು ನೀವೇ ಕದ್ದಿದ್ದೀರೆಂದು ಕ್ಯಾನ್ಸರ್ ಪೀಡಿತ ಮಹಿಳೆಗೆ ಕಿರುಕುಳ ನೀಡಿರುವ ಹೇಯಕರ ಘಟನೆ ನಡೆದಿದೆ. ಈ ಬಗ್ಗೆ ಸ್ಥಳೀಯರಿಂದ ಆಕ್ರೋಶ ವ್ಯಕ್ತವಾಗಿದ್ದು ಸೂಕ್ತ ಕಾನೂನು ಕ್ರಮಕ್ಕೆ ಒತ್ತಾಯಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕಲ್ಲುಗುಂಡಿಯಿಂದ ಸೆಪ್ಟೆಂಬರ್ 26ರಂದು ಒಂದು ಕಟ್ಟು ತೆಂಗಿನ ಕಾಯಿ ಮತ್ತು ಗುಂಡಿ ತೆಗೆಯುವ ಯಂತ್ರವನ್ನು ಹೇರಿಕೊಂಡು ಕೊಡಗು ಜಿಲ್ಲೆಯ ಮದೆನಾಡಿನತ್ತ ಹೊರಟಿದ್ದ ವಾಹನವೊಂದರಿಂದ ಕೈಪಡ್ಕ ಎಂಬಲ್ಲಿ ಬರುವಾಗ ಆ ವಸ್ತುಗಳೆಲ್ಲ ಕೆಳಕ್ಕೆ ಬಿದ್ದಿದೆ ಎನ್ನಲಾಗಿದೆ. ಹಾಗೆ ಮದೆನಾಡಿನತ್ತ ಹೋದವರು ಮರುದಿನ ಅಂದರೆ ಸೆ.27ರಂದು ಹುಡುಕಾಡುತ್ತಾ ವಾಪಸ್ ಬಂದಿದ್ದಾರೆ. ಹಾಗೆ ಬಂದವರಿಗೆ ಕೈಪಡ್ಕದ ಕೊರಗಜ್ಜನ ದ್ವಾರದ ಬಳಿ ಇರುವ ಮನೆಗೆ ಹೋಗಿ ಅಲ್ಲಿ ವಿಚಾರಿಸಿದ್ದಾರೆ. ನಮ್ಮ ವಸ್ತುಗಳು ಇಲ್ಲಿ ಬಿದ್ದಿದೆ ನಿಮಗೇನಾದರೂ ಸಿಕ್ಕಿದೆಯೇ ಎಂದು ಕ್ಯಾನ್ಸರ್ ಪೀಡಿತ ಮಹಿಳೆಯ ಜೊತೆ ಕೇಳಿದ್ದಾರೆ. ಅವರು ನಮಗೆ ಗೊತ್ತಿಲ್ಲ ಎಂದು ಹೇಳಿದ್ದಾರೆ. ಈ ವೇಳೆ ವ್ಯಕ್ತಿಯೊಬ್ಬ ನೀವೇ ಕದ್ದಿದ್ದೀರೆಂದು ಹೇಳಿದ್ದಾನೆ. ಮೊದಲೇ ಶಸ್ತ್ರಚಿಕಿತ್ಸೆಗೆ ಒಳಗಾಗಿ ಕಿಮೋಥೆರಪಿ ಚಿಕಿತ್ಸೆಯಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಮಹಿಳೆ ಇದೆಲ್ಲದರಿಂದ ತೀವ್ರ ನೊಂದಿದ್ದಾರೆ. ಕಲ್ಲುಗುಂಡಿಯ ವಿಷ್ಣುಮೂರ್ತಿ ಸನ್ನಿಧಿಗೆ ಹಾಗೂ ಕೊರಗಜ್ಜನ ಸನ್ನಿಧಿಗೆ ಬಂದು ನಾವೇ ಕದ್ದಿದ್ದನ್ನು ನೋಡಿದ್ದೀನಿ ಎಂದು ನೀನು ಪ್ರಮಾಣ ಮಾಡು ಎಂದು ಹೇಳಿದ ಬಳಿಕ ಕಿಡಿಗೇಡಿಗಳು ಅಲ್ಲಿಂದ ತೆರಳಿದ್ದಾರೆ. ಇದಾದ ಬಳಿಕ ಅದೇ ವ್ಯಕ್ತಿಗಳು ಮಹಿಳೆಯ ಪತಿಯನ್ನೂ ವಿಚಾರಿಸಿ ಮಾನಸಿಕ ಕಿರಿಕಿರಿ ಮಾಡಿರುತ್ತಾರೆ. ಮಾತ್ರವಲ್ಲ ಬೇರೆ ಬೇರೆ ಜನರನ್ನು ಅದೇ ಕಳವಾದ ವಸ್ತುಗಳ ವಿಚಾರಣೆಯ ಹೆಸರಿನಲ್ಲಿ ಆ ಮಹಿಳೆ ಒಬ್ಬಂಟಿಯಾಗಿದ್ದ ಸಂದರ್ಭದಲ್ಲಿ ಮನೆಗೆ ಕಳುಹಿಸಿ ಮಾನಸಿಕವಾಗಿ ಘಾಸಿಯನ್ನುಂಟು ಮಾಡಿದ್ದಾರೆಂದು ಮಹಿಳೆ ನ್ಯೂಸ್ ನಾಟೌಟ್ ಜೊತೆ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಇಂತಹ ಘಟನೆಯನ್ನು ಸ್ಥಳೀಯರು ಕಟು ಪದಗಳಿಂದ ಖಂಡಿಸಿದ್ದಾರೆ. ಸಾರ್ವಜನಿಕ ರಸ್ತೆ ಅದರಲ್ಲೂ ರಾಷ್ಟ್ರೀಯ ಹೆದ್ದಾರಿಯಲ್ಲಿ ಬೇಜಾವ್ದಾರಿಯಿಂದ ತಮ್ಮ ವಸ್ತುಗಳನ್ನು ತಾವೇ ಕಳೆದುಕೊಂಡಿದ್ದಲ್ಲದೆ ಅಮಾಯಕರ ಮನೆಯೊಳಕ್ಕೆ ಇಣುಕುವ ಇಂತಹ ಕ್ರಿಮಿಗಳನ್ನು ಒದ್ದು ಒಳಗೆ ಹಾಕಬೇಕಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಬಗ್ಗೆ ಮಾತನಾಡಿದ ಸ್ಥಳೀಯ ರಮೇಶ್ ಅನ್ನುವವರು ಹೇಳಿದ್ದು ಹೀಗೆ, “ಕಣ್ಣಾರೆ ಕಂಡರೂ ಪಾರಾಮರ್ಶಿಸಿ ನೋಡು ಅನ್ನುವ ಗಾದೆ ಮಾತೇ ಇದೆ. ಕದ್ದಿದ್ದನ್ನು ಎತ್ತಿಕೊಂಡದ್ದನ್ನು ನೀನು ನೋಡಿದರೆ ಮಾತನಾಡು, ಇಲ್ಲವೆ ಇಂತಹ ಜಾಗದಲ್ಲಿ ಕಳೆದು ಹೋಗಿದೆ ಹುಡುಕಿ ಕೊಡಿ ಎಂದು ಪೊಲೀಸ್ ದೂರು ಕೊಡು.ಅದು ಬಿಟ್ಟು ಬೇಕಾಬಿಟ್ಟಿಯಾಗಿ ಅಮಾಯಕರ ಮನೆಯವರಿಗೆ ಕಿರಿಕಿರಿ ಉಂಟು ಮಾಡುವವರನ್ನು ಪೊಲೀಸರು ವಿಚಾರಿಸಿ ಬೆಂಡೆತ್ತಿದರೆ ಸತ್ಯ ಹೊರಗೆ ಬರುತ್ತದೆ. ಈ ಬಗ್ಗೆ ಪೊಲೀಸರು ವಿಚಾರಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವ ಅಗತ್ಯತೆ ಇದೆ ಎಂದು ತಿಳಿಸಿದ್ದಾರೆ.