ನ್ಯೂಸ್ ನಾಟೌಟ್ : ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳು ತಾಲೂಕು ಮಟ್ಟದಲ್ಲಿ ವಾರಕ್ಕೊಮ್ಮೆ ಸಚಿವರು, ಶಾಸಕರನ್ನು ಆಹ್ವಾನಿಸಿ, ಜನ ಸಂಪರ್ಕ ಸಭೆಗಳನ್ನು (Janasamparka Meeting) ನಡೆಸಿ ಸ್ಥಳೀಯ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಆದೇಶ ನೀಡಿದ್ದಾರೆ.
ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾಧಿಕಾರಿಗಳು (District Commissioners) ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ (ZP CEO meeting) ಸಭೆಯಲ್ಲಿ ಮಾತನಾಡಿ, ನಾಡಿನ ಜನತೆ ಸಣ್ಣ ಪುಟ್ಟ ಸಮಸ್ಯೆಗಳಿಗೂ ನನ್ನ ಬಳಿಗೆ ಬರುತ್ತಾರೆ ಎಂದರೆ ನೀವುಗಳು ಇದ್ದು ಏನು ಪ್ರಯೋಜನ ಎಂದು ಜಿಲ್ಲಾಧಿಕಾರಿಗಳಿಗೆ ಪ್ರಶ್ನಿಸಿದರು.
ಮುಖ್ಯಮಂತ್ರಿಯಾದ ಬಳಿಕ ನಾನು ಹಲವಾರು ಜಿಲ್ಲೆಗಳಿಗೆ ಭೇಟಿ ನೀಡಿದ್ದೆ. ಆ ವೇಳೆ ಜನ ಸಾಮಾನ್ಯರು ನೂರಾರು ರೀತಿಯ ಮನವಿಗಳನ್ನು ನನಗೆ ನೀಡುತ್ತಿದ್ದಾರೆ. ಜಿಲ್ಲಾ, ತಾಲ್ಲೂಕು ಮಟ್ಟದಲ್ಲಿ ಬಗೆಹರಿಸಬೇಕಾದ ಸಮಸ್ಯೆಗಳನ್ನು ಹೊತ್ತುಕೊಂಡು ಜನ ನನ್ನ ಬಳಿ ಬರುತ್ತಿದ್ದಾರೆ. ನೀವು ಸ್ಥಳೀಯವಾಗಿ ಜನ ಸಂಪರ್ಕ ಸಭೆ ನಡೆಸಿ ಸ್ಪಂದಿಸಿ ಸ್ಥಳದಲ್ಲೇ ಪರಿಹಾರ ಕೊಟ್ಟಿದ್ದರೆ ಹೀಗೆ ಆಗುತ್ತಿರಲಿಲ್ಲ.
ಕೆಲವೊಂದು ಸಮಸ್ಯೆಗಳಿಗೆ ವಾರದ ಕಾಲ ಮಿತಿಯಲ್ಲಿ ಪರಿಹಾರ ಒದಗಿಸಿ ಕೊಡಿ. ಕೆಲಸ ಆಗಿದೆಯಾ , ಇಲ್ಲವಾ ಎನ್ನುವುದನ್ನು ಮರು ಪರೀಕ್ಷಿಸಿ. ಆಗ ಸ್ಥಳೀಯ ಸಮಸ್ಯೆಗಳಿಗಾಗಿ ಜನತೆ ಬಸ್ ಚಾರ್ಜ್ ಖರ್ಚು ಮಾಡಿಕೊಂಡು ನನ್ನ ತನಕ ಬರುವ ಅಗತ್ಯವೇ ಬೀಳುವುದಿಲ್ಲ ಎಂದು ತಿಳಿಸಿದರು.