ಜಿ 20 ಶೃಂಗಸಭೆಗಾಗಿ ಕೇಂದ್ರ ಸರ್ಕಾರ ಹಣದ ಹೊಳೆಯನ್ನೇ ಹರಿಸಿದೆ ಎನ್ನಲಾಗಿದ್ದು, ಸುಮಾರು 4000 ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ ಎಂದು ವರದಿಗಲು ತಿಳಿಸಿವೆ. ಇದರಲ್ಲಿ ಭದ್ರತಾ ವಿಚಾರಕ್ಕೆ ಸಂಬಂಧಿಸಿದ ಖರ್ಚು ಅಧಿಕ ಎನ್ನಲಾಗಿದೆ.
ಹೀಗಿದ್ದರೂ ಜಿ20 ಶೃಂಗಸಭೆಯ ವೇಳೆ ಅಚಾತುರ್ಯ ನಡೆದಿದ್ದು, ಯುಎಇ ರಾಜಕುಮಾರ ಉಳಿದುಕೊಂಡಿದ್ದ ಹೊಸದಿಲ್ಲಿಯ ಹೋಟೆಲ್ಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಬೆಂಗಾವಲು ವಾಹನ ಪ್ರವೇಶಿಸಿದ್ದು, ಭದ್ರತಾ ಶಿಷ್ಟಾಚಾರ ಉಲ್ಲಂಘನೆಯಾಗಿದೆ. ನಿರ್ಲಕ್ಷಿತ ಚಾಲನೆ ಸಂಬಂಧ ಬೈಡನ್ ಬೆಂಗಾವಲು ವಾಹನದ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು, ಬಳಿಕ ಆತನನ್ನು ಬಿಡುಗಡೆ ಮಾಡಲಾಗಿದೆ.
ಹೊಸದಿಲ್ಲಿಯಲ್ಲಿ ಜಿ20 ಶೃಂಗಸಭೆ ನಡೆಯುತ್ತಿರುವಾಗ ಯುಎಇ ಅಧ್ಯಕ್ಷ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಉಳಿದುಕೊಂಡಿದ್ದ ತಾಜ್ ಹೋಟೆಲ್ಗೆ ಅಮೆರಿಕ ಅಧ್ಯಕ್ಷರ ಬೆಂಗಾವಲು ಪಡೆಯ ವಾಹನಗಳ ಪೈಕಿ ಒಂದು ಕಾರು ಶನಿವಾರ ಪ್ರವೇಶಿಸಿದೆ.
ಕಾರ್ನಲ್ಲಿ ಹಲವು ಸ್ಟಿಕ್ಕರ್ಗಳನ್ನು ಕಂಡ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿ, ಎಚ್ಚರಿಕೆ ಸಂದೇಶ ರವಾನಿಸಿದರು. ಜೋ ಬೈಡನ್ ಹೋಟೆಲ್ಗೆ ತೆರಳುವುದಕ್ಕೂ ಮುನ್ನ ಬೇರೊಬ್ಬ ಗ್ರಾಹಕರನ್ನು ಡ್ರಾಪ್ ಮಾಡಲು ನಿರ್ಧರಿಸಿದ್ದಾಗಿ ಚಾಲಕ ತಿಳಿಸಿದ್ದಾನೆ.
ಬೈಡನ್ ಅವರ ಬೆಂಗಾವಲಿಗೆ ಮೀಸಲಾದ ವಾಹನವು ಶನಿವಾರ ಬೆಳಿಗ್ಗೆ 9.30ಕ್ಕೆ ಐಟಿಸಿ ಮೌರ್ಯ ಹೋಟೆಲ್ಗೆ ತೆರಳಬೇಕಿತ್ತು. ಆದರೆ ಅದಕ್ಕೂ ಮುನ್ನ ಲೋಧಿ ಎಸ್ಟೇಟ್ ಪ್ರದೇಶದಿಂದ ಪಿಕ್ ಮಾಡಿದ ಉದ್ಯಮಿಯೊಬ್ಬರನ್ನು ಬಿಡಲು ತಾಜ್ ಹೋಟೆಲ್ಗೆ ಹೋಗಬೇಕಾಗಿತ್ತು. ಉದ್ಯಮಿಯು ಬೆಳಿಗ್ಗೆ 8 ಗಂಟೆಗೆ ತಾಜ್ ಹೋಟೆಲ್ಗೆ ಹೋಗಲು ಬಯಸಿದ್ದರು. ಬೈಡನ್ ಅವರ ಪಿಕ್ಅಪ್ಗೆ ಇನ್ನೂ ಸಮಯ ಇದ್ದಿದ್ದರಿಂದ ಈ ಟ್ರಿಪ್ ವಹಿಸಿಕೊಂಡಿದ್ದೆ ಎಂದು ವಿಚಾರಣೆ ವೇಳೆ ಚಾಲಕ ವಿವರಿಸಿದ್ದಾನೆ. ತನಗೆ ಶಿಷ್ಟಾಚಾರದ ಅರಿವು ಇರಲಿಲ್ಲ ಎಂದು ಹೇಳಿದ್ದಾನೆ.
ಉದ್ಯಮಿ ಇದ್ದ ಕಾರು ತಾಜ್ ಹೋಟೆಲ್ಗೆ ಪ್ರವೇಶಿಸಿತ್ತು. ಅದರಲ್ಲಿನ ಸ್ಟಿಕ್ಕರ್ ಪರಿಶೀಲಿಸಿದ ಭದ್ರತಾ ಅಧಿಕಾರಿಗಳು, ಇದು ಶಿಷ್ಟಾಚಾರ ಉಲ್ಲಂಘನೆ ಎಂಬ ಕಾರಣದಿಂದ ಕ್ರಮ ಕೈಗೊಂಡರು. ತೀವ್ರ ವಿಚಾರಣೆಗೆ ಒಳಪಡಿಸಿದ ನಂತರ ಚಾಲಕನನ್ನು ಬಿಡುಗಡೆ ಮಾಡಲಾಯಿತು. ಆತನ ಕಾರನ್ನು ಬೈಡನ್ ಬೆಂಗಾವಲು ವಾಹನಗಳ ಪಟ್ಟಿಯಿಂದ ತೆಗೆದು ಹಾಕಲಾಗಿದೆ.