ನ್ಯೂಸ್ ನಾಟೌಟ್ : ಭಾರತೀಯ ಸೇನೆಗೆ ಕೊಡಗಿನ ಕೊಡುಗೆ ಅಪಾರ. ಭೂ ಸೇನೆ, ನೌಕಾ ಸೇನೆ, ವಾಯು ಸೇನೆ ಎಲ್ಲ ವಿಭಾಗಗಳಲ್ಲೂ ಕೊಡಗಿನ ಯುವಕ-ಯುವತಿಯರು ಅವಕಾಶ ಗಿಟ್ಟಿಸಿಕೊಂಡು ದೇಶಸೇವೆಗೈಯ್ಯುತ್ತಿದ್ದಾರೆ. ಅಂತಹವರ ಸಾಲಿನಲ್ಲಿ ಕೊಡಗಿನ ಮುರುವಂಡ ತನುಷ್ ಅಪ್ಪಯ್ಯ ಕೂಡ ಒಬ್ಬರು. ಅವರೀಗ ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್ ಪದವಿಗೇರಿರುವ ಸಾಧನೆಯನ್ನು ಮಾಡಿದ್ದಾರೆ.
ಕೊಳತೋಡು ಬೈಗೋಡು ಗ್ರಾಮದ ತನುಷ್ ಅಪ್ಪಯ್ಯ ಕೊಳತೋಡು ಬೈಗೋಡು ಗ್ರಾಮದ ಮುರುವಂಡ ಎ.ಬೋಪಣ್ಣ ಮತ್ತು ವಿನುತಾ ದಂಪತಿಯ ಪುತ್ರರಾಗಿದ್ದಾರೆ.
ಗೋಣಿಕೊಪ್ಪಲಿನ ಕೂರ್ಗ್ ಪಬ್ಲಿಕ್ ಶಾಲೆಯಲ್ಲಿ (ಕಾಪ್ಸ್) ದ್ವಿತೀಯ ಪಿಯುಸಿವರೆಗೆ ವ್ಯಾಸಂಗ ಮಾಡಿದ್ದಾರೆ.
ಆ ಬಳಿಕ ಹೆಚ್ಚಿನ ಶಿಕ್ಷಣವನ್ನು ಬೆಂಗಳೂರಿನಲ್ಲಿ ಪಡೆದುಕೊಂಡಿದ್ದಾರೆ. ಬೆಂಗಳೂರಿನ ದಯಾನಂದ ಸಾಗರ ಇಂಜಿನಿಯರಿಂಗ್ ಕಾಲೇಜಿನಿಂದ ಸಿವಿಲ್ ಇಂಜಿನಿಯರಿಂಗ್ ಪದವಿ ಪಡೆದುಕೊಂಡಿದ್ದಾರೆ.
ಚೆನ್ನೈನಲ್ಲಿರುವ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಿಂದ ತೇರ್ಗಡೆಯಾಗಿದ್ದಾರೆ. ಬಳಿಕ ಲೆಫ್ಟಿನೆಂಟ್ ಪದವಿಯೊಂದಿಗೆ ತನುಷ್ ಅಪ್ಪಯ್ಯ ಉನ್ನತ ಹುದ್ದೆಯನ್ನು ತಲುಪಿದ್ದಾರೆ. ಅಲಹಾಬಾದ್ ನಲ್ಲಿ ಎಸ್.ಎಸ್. ಬಿ. ಪೂರ್ಣಗೊಳಿಸಿದ್ದ ತನುಷ್ ಅಪ್ಪಯ್ಯ, ಶಾರ್ಟ್ ಸರ್ವಿಸ್ ಕಮಿಷನ್ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ 8ನೇ ಶ್ರೇಯಾಂಕ ಪಡೆದು ಚೆನ್ನೈನ ಆಫೀಸರ್ಸ್ ಟ್ರೈನಿಂಗ್ ಅಕಾಡಮಿಗೆ ಸೇರಿದ್ದರು.